ಬೆಂಗಳೂರು: ಸ್ಯಾಂಡಲ್ವುಡ್ನವರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲ. ಇದರಲ್ಲಿ ರಾಜಾಕಾರಣಿಗಳ ಮಕ್ಕಳು, ಉದ್ಯಮಿಗಳ ಮಕ್ಕಳು, ಸೀರಿಯಲ್ ನಟರು ಭಾಗಿಯಾಗಿರುವ ವಿಚಾರ ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿಬಿ ಪೊಲೀಸರು ಬಂಧಿತ ನಟಿಮಣಿಯರ ಆಪ್ತರನ್ನು ವಿಚಾರಣೆಗೆ ಒಳಪಡಿಸಿ ಬಹುತೇಕ ಮಾಹಿತಿಗಳನ್ನು ಪಡೆದಿರುವುದರ ಜೊತೆಗೆ ರಾಗಿಣಿ ಹಾಗೂ ಸಂಜನಾ ಫೋನ್ ಕಾಲ್ ಡಿಟೇಲ್ಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ, ರಾಗಿಣಿ ಬಂಧನವಾಗುವುದಕ್ಕೂ ಮೊದಲು 100ಕ್ಕೂ ಹೆಚ್ಚು ಜನರ ಜೊತೆ ನಿರಂತರ ಸಂಪರ್ಕ ಹೊಂದಿರುವ ವಿಚಾರ ತಿಳಿದುಬಂದಿದೆ. ಸದ್ಯ ಸಿಸಿಬಿ ಟೆಕ್ನಿಕಲ್ ಟೀಂ ನಟಿಮಣಿಯರೊಂದಿಗೆ ಸಂಪರ್ಕ ಹೊಂದಿರುವವರ 10,000 ಫೋನ್ ಕರೆಗಳ ಪರಿಶೀಲನೆ ಮಾಡಿದ್ದಾರೆ. ನಟಿಮಣಿಯರು ತಮ್ಮ-ತಮ್ಮ ಲಿಂಕ್ ಬಾಯ್ಬಿಡದ ಹಿನ್ನೆಲೆ "CDR" ಮೂಲಕ ಕರೆಗಳ ಮಾಹಿತಿ ಸಂಗ್ರಹ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ನಟಿಮಣಿಯರಿಗೆ ಮತ್ತಷ್ಟು ಸಂಕಷ್ಟ: ಸಿಸಿಬಿ ತನಿಖೆ ಚುರುಕು
CDR ಹಾಕಿದಾಗ ಆರೋಪಿಗಳು ಯಾರ ಜೊತೆ ಮಾತನಾಡಿದ್ದಾರೆ, ಏನೆಲ್ಲಾ ಮಾತನಾಡಿದ್ದಾರೆ ಅನ್ನೋದರ ಡೇಟಾ ಕಲೆ ಹಾಕ್ತಿದ್ದಾರೆ. ಸದ್ಯ ಡ್ರಗ್ಸ್ ಮಾಫಿಯಾದಲ್ಲಿ ಬಂಧಿತ ಆರೋಪಿಗಳು ಕೇವಲ ನಟ-ನಟಿಯರಿಗಷ್ಟೇ ಅಲ್ಲ, ಕೆಲ ಪ್ರಭಾವಿ ವ್ಯಕ್ತಿಗಳ ಆಪ್ತರಿಗೂ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ಟೆಕ್ನಿಕಲ್ ಎವಿಡನ್ಸ್ ಮುಂದಿಟ್ಟುಕೊಂಡು ಸಿಸಿಬಿ ಅಧಿಕಾರಿಗಳು 3 ತಂಡಗಳಾಗಿ ಬೃಹತ್ ಜಾಲದ ಪತ್ತೆಗೆ ಮುಂದಾಗಿದ್ದಾರೆ. ರಾಗಿಣಿ ಹಾಗೂ ಸಂಜನಾರನ್ನು ಪಕ್ಕಾ ಸಾಕ್ಷ್ಯಾಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಇದೇ ಕಾರಣಕ್ಕೆ ರಾಗಿಣಿ ಮತ್ತು ಸಂಜನಾ ಅವರ ತೀವ್ರ ವಿಚಾರಣೆಯನ್ನು ಇಂದು ನಡೆಸಲಿದ್ದಾರೆ.