ಬೆಂಗಳೂರು: ಕ್ರೈಸ್ತ ಸಮುದಾಯದವರ ಕಲ್ಯಾಣ ಉದ್ದೇಶದಿಂದಲೇ ರಾಜ್ಯದಲ್ಲಿನ ಚರ್ಚ್‌ಗಳ ಮಾಹಿತಿ ಸಂಗ್ರಹಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಮುಂದೆ ಸಮರ್ಥಿಸಿಕೊಂಡಿದೆ.
ರಾಜ್ಯದಲ್ಲಿನ ಚರ್ಚ್‌ಗಳ ಮಾಹಿತಿ ಸಂಗ್ರಹಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸೂಚಿಸಿ ಸರ್ಕಾರ 2021ರ ಜು.7ರಂದು ಹೊರಡಿಸಿದ ಸುತ್ತೋಲೆ ರದ್ದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಈ ಹಿಂದೆ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಆಕ್ಷೇಪಣೆ ಹೇಳಿಕೆ ಸಲ್ಲಿಸಿರುವ ಸರ್ಕಾರ, ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯವನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ವಹಿಸಲಾಗಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ಉದ್ದೇಶಕ್ಕೆ ಮಾಹಿತಿ ಸಂಗ್ರಹ
ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ, ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ನವೀಕರಣ, ವಸತಿ ಸಹಿತ ಶಾಲೆ ಮತ್ತು ವಸತಿ ರಹಿತ ಶಾಲೆಗಳ ಆರಂಭ, ಹಾಸ್ಟೆಲ್ ನಿರ್ಮಾಣ, ಚರ್ಚ್, ಗುರುದ್ವಾರ, ಜೈನ್ ಬಸದಿಗಳ ರಿಪೇರಿ ಕಾರ್ಯ ಮತ್ತು ಅನಾಥಾಶ್ರಮಗಳಿಗೆ ಹಣಕಾಸು ನೆರವು ಕಲ್ಪಿಸುವುದನ್ನು ನಿರ್ದೇಶನಾಲಯ ನೋಡಿಕೊಳ್ಳುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ಕ್ಷೇಮಾಭಿವೃದ್ಧಿಗೆ ಸೂಕ್ತ ಯೋಜನೆ ಕಾರ್ಯರೂಪಕ್ಕೆ ತರುತ್ತದೆ. ಅದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣಕಾಸು ಮೀಸಲಿಡಲಾಗುತ್ತದೆ ಎಂದು ತಿಳಿಸಿದೆ.
ಅಲ್ಲದೆ, ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಸೂಕ್ತ ಹಾಗೂ ಸಂಪೂರ್ಣ ಮಾಹಿತಿ ಇಲ್ಲದಿದ್ದರೆ ಅವುಗಳಿಗೆ ಹಣ ಮೀಸಲಿಡಲು ಮತ್ತು ಬಜೆಟ್‌ನಲ್ಲಿ ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಬಜೆಟ್ ಉದ್ದೇಶದಿಂದ ಹಣಕಾಸು ಇಲಾಖೆಗೆ ಯಾವುದೇ ಮಾಹಿತಿ ನೀಡಲಾಗದು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.
ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಒಟ್ಟು 1,923 ಕ್ರೈಸ್ತ ಸಂಸ್ಥೆಗಳಿಗೆ 2011ರಿಂದ ಸುಮಾರು 412 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆಯ ಸೌಲಭ್ಯಗಳನ್ನು ಕ್ರೈಸ್ತ ಸಮುದಾಯದವರಿಗೆ ತಲುಪಿಸುವ ಉದ್ದೇಶದಿಂದ 2021ರ ಜುಲೈ 7ರಂದು ಅಲ್ಪಸಂಖ್ಯಾತರ ಇಲಾಖೆ ಸುತ್ತೋಲೆ ಹೊರಡಿಸಿ, ಎಲ್ಲಾ ಜಿಲ್ಲೆಗಳಲ್ಲಿರುವ ಚರ್ಚ್‌ಗಳ ಮಾಹಿತಿ ನೀಡಲು ಮತ್ತು ಯೋಜನೆ ಜಾರಿಗೊಳಿಸಲು ಆಯಾ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಆಕ್ಷೇಪಣೆಯ ಅರ್ಜಿಯಲ್ಲಿ ವಿವರಿಸಲಾಗಿದೆ.
ಅರ್ಜಿದಾರರ ಆರೋಪ
ಅಲ್ಪಸಂಖ್ಯಾತರ ನಿರ್ದೇಶನಾಲಯ ಜು.7ರಂದು ಹೊರಡಿಸಿರುವ ಸುತ್ತೋಲೆ ಅರ್ಥಹೀನವಾಗಿದ್ದು, ತಾರತಮ್ಯದಿಂದ ಕೂಡಿದೆ. ಸಮೀಕ್ಷೆಯಲ್ಲಿ ಚರ್ಚ್‌ಗಳು ಇರುವ ಸ್ಥಳ, ತಾಲೂಕು, ಜಿಲ್ಲೆ ಹಾಗೂ ಅವುಗಳ ವಿಧಾನಸಭಾ ಕೇತ್ರದ ವ್ಯಾಪ್ತಿಯ ದತ್ತಾಂಶಗಳು ಮತ್ತು ಚರ್ಚ್‌ಗಳ ಹೆಸರು, ವಿಳಾಸ, ಖಾತೆ ಸಂಖ್ಯೆ, ಸರ್ವೇ ಸಂಖ್ಯೆ ಹಾಗೂ ಪಾದ್ರಿಗಳ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಆ ಮೂಲಕ ಧರ್ಮದ ಆಧಾರದಲ್ಲಿ ಕ್ರೈಸ್ತರಿಗೆ ಕಿರುಕುಳ ನೀಡುತ್ತಿದೆ. ಇದು ಕ್ರೈಸ್ತರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಇದನ್ನೂ ಓದಿ: 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೆ ಮಾತ್ರ ಮಾಲ್ಗಳಿಗೆ ಪ್ರವೇಶ: ಇಂದಿನಿಂದಲೇ ಚೆಕ್ಕಿಂಗ್ ಆರಂಭ