ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು, ಅದನ್ನು ಹತ್ತಿಕ್ಕುವ ಸಲುವಾಗಿ ಭವಿಷ್ಯದಲ್ಲಿ ಎಲ್ಲ ಪೊಲೀಸರು ತಾಂತ್ರಿಕ ಪರಿಣಿತಿ ಪಡೆಯಬೇಕು. ಈ ದಿಸೆಯಲ್ಲಿ ಐಟಿಬಿಟಿ ಕಂಪನಿಗಳ ಸಹಾಯಪಡೆದು ತರಬೇತಿ ನೀಡುವ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಐಟಿ-ಬಿಟಿ ಕಂಪೆನಿಗಳೊಂದಿಗೆ ಹಮ್ಮಿಕೊಂಡಿದ್ದ ಟೆಕ್‌ಫ್ಯೂಷನ್ ಸನ್ ರೈಸ್ ಸಮ್ಮಿಟ್ದಲ್ಲಿ ಭಾಗವಹಿಸಿದ ಪರಮೇಶ್ವರ್ ಅವರು, ಸುಮಾರು 50ಕ್ಕೂ ಹೆಚ್ಚು ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಮುಖ್ಯವಾಗಿ ಸೈಬರ್ ಕ್ರೈಂ ನಿಯಂತ್ರಣ ಹಿನ್ನೆಲೆಯಲ್ಲಿ ತಂತ್ರಜ್ಞಾನ ಎರವಲು ಪಡೆಯುವುದರ ಬಗ್ಗೆ ಸಮಾಲೋಚನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ದಿನೇ ದಿನೆ ಸೈಬರ್ ಕ್ರೈಂ ಅಪರಾಧ ಅಧಿಕವಾಗುತ್ತಿವೆ. ತಹಬದಿಗೆ ತರಲು ಮೊದಲು ಎಲ್ಲ ಪೊಲೀಸರು ತಂತ್ರಜ್ಞಾನವನ್ನು ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಐಟಿ ಕಂಪನಿಗಳ ನೆರವಿನಿಂದ ಅವರ ಹೊಸ ಸಾಫ್ಟ್ ವೇರ್ಗಳನ್ನು ಪಡೆಯುವ ಈ ಮೂಲಕ ತರಬೇತಿ ಜೊತೆ ಅಪರಾಧ ಕಡಿಮೆಗೊಳಿಸಲು ಶ್ರಮಿಸಲಾಗುವುದು ಎಂದರು.
ಸೈಬರ್ ಸೆಕ್ಯುರಿಟಿ ಸವಾಲುಗಳ ಬಗ್ಗೆ ಸಹಕರಿಸುವುದಾಗಿ ಐಟಿ ಕಂಪೆನಿಗಳು ಹೇಳಿವೆ. ಅನೇಕ ಕಂಪನಿಗಳು ರೀಸರ್ಚ್ ಅಂಡ್ ಲ್ಯಾಬೊರೇಟರಿಯನ್ನು ಉಪಯೋಗಿಸುವ ಬಗ್ಗೆ ತಿಳಿಸಿದ್ದು, ಮುಂದೆ ಐಟಿ ಕಂಪನಿಗಳ ಜೊತೆ ಪೊಲೀಸ್ ಇಲಾಖೆ ಪಾಲುದಾರಿಕೆ ಹೊಂದಲಿದೆ. ಇದರಿಂದ ಸೈಬರ್ ಕ್ರೈಂ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ವಿವರವಾಗಿ ಚರ್ಚೆಯಾಗಿದ್ದು, ಈ ಕಾರ್ಯಕ್ರಮವನ್ನು ಪ್ರತಿವರ್ಷ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ್ ಬಂದ್ ಮಾಡದಂತೆ ಮನವಿ: ಇದೇ ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಮಾಡದಂತೆ ಗೃಹಸಚಿವ ಪರಮೇಶ್ವರ್ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ. ನಿನ್ನೆ ಬೆಂಗಳೂರು ಬಂದ್ ವೇಳೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಬಂದ್ ನಡೆಸಿದ ಎಲ್ಲ ಸಂಘಟನೆಗಳು ಶಾಂತಿಯುತವಾಗಿ ಬಂದ್ ಮಾಡಿದ್ದು, ಧನ್ಯವಾದ ತಿಳಿಸುತ್ತೇನೆ. ನಮ್ಮ ಪೊಲೀಸರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ.
29 ರಂದು ಕರ್ನಾಟಕ ಬಂದ್ ಮಾಡಬೇಡಿ ಅಂತಾ ಸಂಘಟನೆಗಳಲ್ಲಿ ಮನವಿ ಮಾಡ್ತೀನಿ. ಬೇಕಾದರೆ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಿಕೊಳ್ಳಿ, ಬಂದ್ ನಡೆಸಬೇಡಿ. ಬಂದ್ನಿಂದ ಯಾವುದೇ ಪ್ರಯೋಜನ ಇಲ್ಲ. ಕಾವೇರಿ ನೀರು ಪ್ರಾಧಿಕಾರಿ ನೀಡಿರುವ ಆದೇಶ ಪಾಲಿಸುವುದು ಅನಿವಾರ್ಯವಾಗಿದೆ. ಬಂದ್ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಭದ್ರತೆ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಡಿಜಿಯವರು ಹಾಗೂ ಎಲ್ಲ ಜಿಲ್ಲಾ ಎಸ್ಪಿಗಳಿಗೆ ಜಿಲ್ಲೆಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂಓದಿ:ಕಾವೇರಿ ನೀರು ವಿಚಾರವಾಗಿ ಕಮಲ-ದಳ ಜಂಟಿ ಹೋರಾಟ; ಸರ್ಕಾರಕ್ಕೆ ಬಿಎಸ್ವೈ, ಹೆಚ್ಡಿಕೆ ಎಚ್ಚರಿಕೆ ಸಂದೇಶ