ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಶುಭಾಶಯ ಸಲ್ಲಿಕೆ ಮಾಡಿದ್ದು, ಪವಿತ್ರ ಈದ್ ಉಲ್ ಫಿತರ್ ಹಬ್ಬ ಸಾರುವ ಸ್ನೇಹ, ತ್ಯಾಗ ಮತ್ತು ಭಾತೃತ್ವದ ಸಂದೇಶವನ್ನು ನಾವೆಲ್ಲ ಅರಿತು, ಅಳವಡಿಸಿಕೊಂಡು ಬಾಳೋಣ. ನಾಡಿನ ನನ್ನ ಎಲ್ಲಾ ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿಡಿಯೋ ಸಂದೇಶ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದ್ದು, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಇನ್ನೂ ಮಾಜಿ ಸಚಿವ ಆರ್. ವಿ. ದೇಶಪಾಂಡೆ ತಮ್ಮ ಸಂದೇಶದಲ್ಲಿ, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಈ ಬಾರಿ ಕೋವಿಡ್ 19 ಮಹಾಮಾರಿ ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ, ಹೀಗಾಗಿ ಸಾಮೂಹಿಕವಾಗಿ ಸೇರದೇ, ಮನೆಯಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಣೆ ಮಾಡಿ ಎಂದು ಮನವಿ ಮಾಡುತ್ತೇನೆ. ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ. ಬಾತೃತ್ವಕ್ಕೆ ನಮ್ಮ ದೇಶ ಒಂದು ಉದಾಹರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೂಡ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇವರಲ್ಲದೇ ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಇತರೆ ಮಾಜಿ ಸಚಿವರುಗಳು ಹಾಗೂ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ.