ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸ ಮಾಡುವ ನೈಜೀರಿಯಾ ಪ್ರಜೆಗಳ ಮೇಲೆ ಕಣ್ಣಿಡಲು ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಆದರೂ ನಗರದಲ್ಲಿ ಮಾದಕ ವಸ್ತು ಹಾಗೂ ಕೊಕೇನ್ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಕ್ರಿಶ್ಚಿಯನ್ ಓಜೋಮೆನಾ ಹಾಗೂ ಒಕೊನ್ಕ್ವೊ ಬೆಂಜಮಿನ್ ಬಂಧಿತರು. ಈ ಆರೋಪಿಗಳು ನಗರದ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ನ ನೆಲಮಹಡಿಯಲ್ಲಿರುವ ಮನೆಯಲ್ಲಿ ಇಬ್ಬರು ವಾಸಾವಿದ್ದು, ಕೊಕೇನ್ ಮಾದಕ ವಸ್ತುಗಳನ್ನು ಯಾರಿಗೂ ಅನುಮಾನ ಬಾರದ ಹಾಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಇನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ನೈಜೀರಿಯಾದಿಂದ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದು ಸಂಪಿಗೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಹಾಗೆಯೇ ಇತರೆ ನೈಜೀರಿಯಾ ಪ್ರಜೆಗಳಿಂದ ಕೊಕೇನ್ ಖರೀದಿ ಮಾಡಿ ಮಾರಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಬಂಧಿತ ಆರೋಪಿಗಳಿಂದ 14.5 ಗ್ರಾಂ ತೂಕದ ಕೊಕೇನ್, ಎರಡು ದ್ವಿಚಕ್ರ ವಾಹನ, ಮೂರು ಮೊಬೈಲ್ ಫೋನ್, ಒಂದು ತೂಕದ ಯಂತ್ರ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಈ ಸಬಂಧ ಸಂಪಿಗೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇವರ ಜೊತೆ ಇನ್ನಿತರ ಆರೋಪಿಗಳು ಇರುವ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿದ್ದಾರೆ.