ಬೆಂಗಳೂರು: ಸಮ್ಮಿಶ್ರ ಸರ್ಕಾರದ ನಾಯಕರು ಪ್ರಜಾತಂತ್ರದ ವ್ಯವಸ್ಥೆಗೆ ಮಾರಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಯಲಹಂಕದ ರಮಡಾ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಸೋಮವಾರ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿದ್ದಾರೆ. ಇದು ಬರಿ ಬಾಯಿಮಾತಿಗೆ ಮಾತ್ರ ಸೀಮಿತ ಆಗುತ್ತಾ ಕಾದು ನೋಡಬೇಕಿದೆ. ಗೌರ್ನರ್ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ನಿನ್ನೆ ಕಲಾಪದಲ್ಲಿ ರಾಜೀನಾಮೆ ಕೊಟ್ಟು ಹೊರಗಡೆ ಇರುವ ನಾಯಕರ ಬಗೆಗೆ ಅತ್ಯಂತ ಕೀಳುಮಟ್ಟದ ಮಾತುಗಳನ್ನಾಡಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡಿರುವ ಶಾಸಕ ಶ್ರೀನಿವಾಸಗೌಡ ಎಸಿಬಿ ಮುಂದೆ ಸುಳ್ಳು ಹೇಳಿ ಸಿಕ್ಕಿಹಾಕಿ ಕೊಂಡಿದ್ದರು. ಸಭ್ಯಸ್ಥರಾದ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಸಮ್ಮಿಶ್ರ ಸರ್ಕಾರದ ನಾಯಕರು ಬಹಳ ಕೀಳಾಗಿ ಮಾತನಾಡಿದ್ದಾರೆ. ಅವರು ಗೈರಾದ ವೇಳೆ ಇಷ್ಟು ಕೀಳಾಗಿ ಮಾತನಾಡಬಾರದಿತ್ತು. ಬೇಜವಾಬ್ದಾರಿಯಾಗಿ ಮಾತನಾಡಿದ ಸಾ.ರಾ. ಮಹೇಶ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ವಿಶ್ವಾಸಮತಕ್ಕೆ ಅವಕಾಶ ಸಿಕ್ಕಿಲ್ಲ ಎಂದರೆ ನಿಮ್ಮ ನಡೆ ಏನು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾನೂನಾತ್ಮಕ ಹೋರಾಟಕ್ಕೆ ಮುಂದಾಗತ್ತೇವೆ. ಸೋಮವಾರ ಏನ್ ಮಾತು ಕೊಟ್ಟಿದ್ದಾರೆ, ಅದರ ಪ್ರಕಾರ ನಡೆದುಕೊಳ್ಳಲಿ. ಅದಕ್ಕೆ ಅನುಗುಣವಾಗಿ ಕಾನುನಾತ್ಮಕ ಕ್ರಮ ಕೈಗೊಳ್ತೇವೆ. ರಾಜ್ಯ ಸರ್ಕಾರ ಗೌರ್ನರ್ ಸೂಚನೆಯನ್ನು ಅನೇಕ ಸಲ ಉಲ್ಲಂಘನೆ ಮಾಡಿದೆ. ಮೈತ್ರಿ ಸರ್ಕಾರ ಭಂಡ ಸರ್ಕಾರ. ಬಿಜೆಪಿ ಪಕ್ಷ ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನ ತೋರಿದೆ ಅಂತಾರೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದರು.