ಬೆಂಗಳೂರು : ಸದ್ಯ ರಾಜ್ಯಕ್ಕೆ ಕಲ್ಲಿದ್ದಲಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಲ್ಲಿದ್ದಲಿನ ಕೊರತೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿ ಲೋಡ್ ಶೆಡ್ಡಿಂಗ್ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಕಲ್ಲಿದ್ದಲು ಪೂರೈಕೆ, ವಿದ್ಯುತ್ ಉತ್ಪಾದನೆಯ ಸ್ಥಿತಿಗತಿ ಏನಿದೆ ಎಂಬುದರ ಸಮಗ್ರ ವರದಿ ಇಲ್ಲಿದೆ.
ಕಲ್ಲಿದ್ದಲು ಕೊರತೆ ಸದ್ಯ ರಾಜ್ಯ ಸರ್ಕಾರದ ನಿದ್ದೆಗೆಡಿಸಿದೆ. ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಮೂರೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಇದರಿಂದ ರಾಜ್ಯಾದ್ಯಂತ ಕತ್ತಲು ಆವರಿಸುವ ಪರಿಸ್ಥಿತಿ ಎದುರಾಗಿದೆ.
ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಕೇಂದ್ರ ಸಚಿವರನ್ನು ಭೇಟಿಯಾಗಿ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಸಿಎಂಗೆ ಕೇಂದ್ರ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇತ್ತ ಸಿಎಂ ಬೊಮ್ಮಾಯಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಕಲ್ಲಿದ್ದಲು ಪೂರೈಕೆ ಸ್ಥಿತಿಗತಿ ಬಗ್ಗೆ ನಿಗಾ ವಹಿಸಿದ್ದಾರೆ.
ಮಳೆಗಾಲ ಹಾಗೂ ಸಂಪೂರ್ಣ ಆರ್ಥಿಕ ಚಟುವಟಿಕೆ ಪುನಾರಂಭವಾಗದ ಹಿನ್ನೆಲೆ ವಿದ್ಯುತ್ ಬೇಡಿಕೆ ಕಡಿಮೆ ಇದೆ. ಇದರಿಂದ ಉಷ್ಣ ವಿದ್ಯುತ್ ಸ್ಥಾವರದಲ್ಲಿನ ಕುಂಠಿತವಾದ ವಿದ್ಯುತ್ ಉತ್ಪಾದನೆಯಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ.
ಉಷ್ಣ ಸ್ಥಾವರಗಳಿಗೆ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಎಷ್ಟು?: ಬಳ್ಳಾರಿ ಉಷ್ಣ ಸ್ಥಾವರಕ್ಕೆ ನಿತ್ಯ 25 ಸಾವಿರ ಟನ್ ಕಲ್ಲಿದಲು ಅವಶ್ಯಕತೆ ಇದೆ. ಮೂರು ವಿದ್ಯುತ್ ಘಟಕ ಹೊಂದಿರುವ ಬಳ್ಳಾರಿ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆಯಿಂದ ಎರಡು ಘಟಕ ಸ್ಥಗಿತವಾಗಿದೆ.
ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲಿ ದಾಸ್ತಾನು ಬರಿದಾದ ಹಿನ್ನೆಲೆ 15 ದಿನಗಳ ಹಿಂದೆ ಮೂರನೇ ಘಟಕ (700 ಮೆ.ವಾ), ಅ.2ರಂದು ಎರಡನೇ ಘಟಕ (500 ಮೆ.ವಾ.) ಸ್ಥಗಿತಗೊಳಿಸಲಾಗಿದೆ.
ಸದ್ಯಕ್ಕೆ ಪ್ರತಿದಿನ 8,000 ಮೆಟ್ರಿಕ್ ಲಭ್ಯವಾಗುತ್ತಿದೆ. 500 ಮೆಗಾ ವ್ಯಾಟ್ ಸಾಮರ್ಥ್ಯದ ಒಂದನೇ ಘಟಕ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತಿದೆ. ಬಳ್ಳಾರಿಗೆ ಸೋಮವಾರ ಮೂರು ರ್ಯಾಕ್ ಕಲ್ಲಿದ್ದಲು ಬಂದಿದೆ. ಅಂದರೆ ಸುಮಾರು 12 ಸಾವಿರ ಟನ್‌ನಷ್ಟು ಕಲ್ಲಿದ್ದಲು ಪೂರೈಕೆಯಾಗಿದೆ.
ರಾಯಚೂರು ಉಷ್ಣಸ್ಥಾವರಕ್ಕೂ ಪ್ರತಿನಿತ್ಯ 25 ಸಾವಿರ ಟನ್ ಕಲ್ಲಿದ್ದಲು ಬೇಕು. ರಾಯಚೂರು ಉಷ್ಣ ಸ್ಥಾವರಕ್ಕೆ ಸುಮಾರು 8 ಸಾವಿರ ಟನ್‌ನಷ್ಟು ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಕೊರತೆಯಿಂದ ರಾಯಚೂರು ಸ್ಥಾವರದಲ್ಲಿ ಮೂರು ಘಟಕ ಸ್ಥಗಿತಗೊಳಿಸಲಾಗಿದೆ. ಇದರಿಂದ ಕೇವಲ ಅರ್ಧ ಯರಮರಸ್ ಉಷ್ಣ ಸ್ಥಾವರಕ್ಕೆ ನಿತ್ಯ 24 ಸಾವಿರ ಟನ್ ಕಲ್ಲಿದ್ದಲು ಬೇಕು.
ಆದ್ರೆ, ಸೋಮವಾರ ಸುಮಾರು 8 ಟನ್‌ನಷ್ಟು ಕಲ್ಲಿದ್ದಲು ಬಂದಿದೆ. ಪ್ರತಿನಿತ್ಯ ಈ ಮೂರು ಉಷ್ಣ ಸ್ಥಾವರಗಳಿಗೂ ಸುಮಾರು 20 ರಿಂದ 24ರಷ್ಟು ರ್ಯಾಕ್‌ಗಳು ಬರುತ್ತಿತ್ತು. ಆದರೆ, ಈಗ ಮೂರು ಸ್ಥಾವರಗಳಿಂದ ಪ್ರತಿನಿತ್ಯ ಸುಮಾರು 7 ರಿಂದ 10ರಷ್ಟು ರ್ಯಾಕ್‌ಗಳು ಮಾತ್ರ ಬರುತ್ತಿದೆ.
ಬರಿದಾದ ಕಲ್ಲಿದ್ದಲು ದಾಸ್ತಾನು : ಸಾಮಾನ್ಯವಾಗಿ ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಪೂರೈಕೆಗೆ ಸಮಸ್ಯೆಯಾಗುತ್ತದೆ. ತೋಯ್ದ ಕಲ್ಲಿದ್ದಲು ಬಳಕೆ ಅಸಾಧ್ಯ. ಈ ಹಿಂದೆ ಶಾಖೋತ್ಪನ್ನ ಸ್ಥಾವರಗಳಲ್ಲಿ 10 ರಿಂದ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿರುತ್ತಿತ್ತು. ಸಂಕಷ್ಟ ಪರಿಹಾರ ಸೂತ್ರದ ಅನ್ವಯ ತುರ್ತು ಅಗತ್ಯವಿರುವಷ್ಟು ದಾಸ್ತಾನು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಸದ್ಯದ ವಿದ್ಯುತ್ ಉತ್ಪಾದನೆ ಸ್ಥಿತಿಗತಿ : ಪ್ರಸ್ತುತ ರಾಜ್ಯದ ವಿದ್ಯುತ್ ಬೇಡಿಕೆ 153.669 ಮಿ.ಯೂನಿಟ್ ನಷ್ಟಿದೆ. ಆದರೆ, ಕಲ್ಲಿದ್ದಲು ದಾಸ್ತಾನು ಕಡಿಮೆ ಇರುವ ಹಿನ್ನೆಲೆ ರಾಯಚೂರು, ಬಳ್ಳಾರಿ ಮತ್ತು ಯರಮರಸ್‌ನ 13 ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ 6 ಘಟಕಗಳನ್ನು ಮಾತ್ರ ಚಾಲನೆಯಲ್ಲಿಡಲಾಗಿದೆ.
ಈ ಘಟಕಗಳಿಂದ 37.89 ಮಿ.ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಜಲ ವಿದ್ಯುತ್ ಸ್ಥಾವರಗಳಿಂದ 37.10 ಮಿ.ಯೂನಿಟ್, ಸೋಲಾರ್, ಪವನ, ಅನಿಲ ವಿದ್ಯುದಾಗಾರಗಳಿಂದ 0.1160 ಮಿ.ಯೂ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಖಾಸಗಿ ವಿದ್ಯುದಾಗರಗಳು ಮತ್ತು ಕೇಂದ್ರದ ಗ್ರಿಡ್‌ನಿಂದ ಸುಮಾರು 81.58 ಮಿ.ಯೂ. ವಿದ್ಯುತ್ ಪೂರೈಕೆಯಾಗುತ್ತಿದೆ.