ಬೆಂಗಳೂರು: ನಾಮಪತ್ರಗಳ ಸಲ್ಲಿಕೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ನಾಳೆಯಿಂದ ಮೇ 8ರ ವರೆಗೆ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸಲಿದ್ದಾರೆ. ಜಯ ವಾಹಿನಿ ಹೆಸರಿನ ವಾಹನದಲ್ಲಿ ಯಾತ್ರೆ ಹೊರಡಲಿರುವ ಸಿಎಂ, ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.
ನಾಳೆ ಬೆಳಗ್ಗೆ 11 ಗಂಟೆಗೆ ಯಲಹಂಕದಲ್ಲಿ ರೋಡ್ ಶೋ ನಡೆಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. 12.30ಕ್ಕೆ ನೆಲಮಂಗಲದಲ್ಲಿ ರೋಡ್ ಶೋ ನಡೆಸಲಿದ್ದು, ನಂತರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30ಕ್ಕೆ ದಾಬಸ್ ಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
2.15ಕ್ಕೆ ತುಮಕೂರು ಗ್ರಾಮಾಂತರ ಜಿಲ್ಲೆಯ ಗೂಳೂರಿನಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. 3 ಗಂಟೆಗೆ ತುಮಕೂರು ನಗರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 4 ಗಂಟೆಗೆ ಗುಬ್ಬಿ, 5 ಗಂಟೆಗೆ ಕೆಬಿ ಕ್ರಾಸ್, 6 ಗಂಟೆಗೆ ತಿಪಟೂರಿನಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ 7 ಗಂಟೆಗೆ ಅರಸೀಕರೆಯಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. 7.45ಕ್ಕೆ ಬಾಣಾವರದಲ್ಲಿ ರೋಡ್ ಶೋ ನಡೆಸುತ್ತಾರೆ. 8.15ಕ್ಕೆ ಕಡೂರಿನಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ರಾತ್ರಿ 10 ಗಂಟೆಗೆ ದಾವಣಗೆರೆ ತಲುಪಿ ವಾಸ್ತವ್ಯ ಹೂಡುವರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಭಾನುವಾರ ಪ್ರವಾಸ ಮಾಡಲಿರುವ ಸಿಎಂ ನಂತರ ದಾವಣಗೆರೆ, ಮಧ್ಯ ಕರ್ನಾಟಕ ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗು ಹಳೆ ಮೈಸೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.
ಪ್ರತಿ ದಿನ 10 ರಿಂದ 13 ಕ್ಷೇತ್ರಗಳಿಗೆ ಸಿಎಂ ತೆರಳಲಿದ್ದು, ಪ್ರತಿ ಕ್ಷೇತ್ರದಲ್ಲಿ ಒಂದರಿಂದ ಎರಡು ಕಿಲೋ ಮೀಟರ್ ರೋಡ್ ಶೋ ನಡೆಸುವರು. ಅಲ್ಲಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡುವರು. ನಾಳೆಯಿಂದ ಆರಂಭವಾಗುವ ರೋಡ್ ಶೋ ಮೇ 8 ರ ವರೆಗೂ ನಿರಂತರವಾಗಿ ನಡೆಯಲಿದೆ. ಅಮಿತ್ ಶಾ ಸೂಚನೆಯಂತೆ ಸಿಎಂ ನಿರಂತರ ರಾಜ್ಯ ಪ್ರವಾಸ ಮಾಡಲಿದ್ದಾರೆ.
ಸಿಎಂ ರಾಜ್ಯ ಪ್ರವಾಸಕ್ಕಾಗಿ ವಿಶೇಷ ವಾಹನ ಸಿದ್ದಪಡಿಸಲಾಗಿದೆ. ಈ ಹಿಂದೆ ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ನಡೆಸುವ ವೇಳೆ ನಾಲ್ಕು ವಾಹನಗಳಿಗೆ ವಿಶೇಷ ರೀತಿ ವಿನ್ಯಾಸ ಮಾಡಲಾಗಿತು. ಅದೇ ರೀತಿ ಈಗ ಮುಖ್ಯಮಂತ್ರಿಗಳ ರಾಜ್ಯ ಪ್ರವಾಸದ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು ಸಿಎಂ ಅಧಿಕೃತ ನಿವಾಸವನ್ನು ತಲುಪಿದೆ. ನಾಳೆ ಈ ವಾಹನವನ್ನು ಅನಾವರಣಗೊಳಿಸಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.
ಕಳೆದ ರಾತ್ರಿ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪ್ರವಾಸದ ಕುರಿತು ಪ್ರಸ್ತಾಪವಾಗಿದ್ದು ಸಮಗ್ರ ವಿವರ ನೀಡುವಂತೆ ಸಿಎಂಗೆ ಅಮಿತ್ ಶಾ ಸೂಚನೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅಮಿತ್ ಶಾ ಭೇಟಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಪ್ರವಾಸದ ವಿವರಗಳನ್ನು ಅಮಿತ್ ಶಾಗೆ ನೀಡಿದರು.
ನಾಳೆಯಿಂದ ಆರಂಭವಾಗಲಿರುವ ರೋಡ್ ಶೋ ಯಾವ ಯಾವ ಜಿಲ್ಲೆ ಮುಖಾಂತರ ಸಾಗಲಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ,ಮಧ್ಯ ಕರ್ನಾಟಕ,ಹಳೆ ಮೈಸೂರು ಭಾಗವನ್ನು ಒಳಗೊಂಡಂತೆ ರೋಡ್ ಶೋ ಹೇಗೆ ಸಾಗಲಿದೆ ಎನ್ನುವ ವಿವರ ನೀಡಿದರು.
ಇದನ್ನೂಓದಿ:ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ