ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದು 2ನೇ ಅಲೆ ಮುನ್ಸೂಚನೆ ಎಂದು ತಜ್ಞರ ಸಮಿತಿ ತಿಳಿಸಿದ್ದು, ಪರಿಸ್ಥಿತಿ ಎದುರಿಸಲು ಕೆಲ ಸಲಹೆ ನೀಡಿದ್ದು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಮತ್ತೆ ಲಾಕ್‌ಡೌನ್ ಆಗಬಾರದು ಎಂದರೆ ಜನತೆ ಕಟ್ಟುನಿಟ್ಟಾಗಿ ಕೊರೊನಾ ನಿಯಮ ಪಾಲನೆ ಮಾಡಬೇಕು ಎಂದು ಸಿಎಂ ತಿಳಿಸಿದ್ದಾರೆ.
ತಜ್ಞರ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೊರೊನಾ ಪರಿಸ್ಥಿತಿ ಅವಲೋಕನ ಕುರಿತು ತಜ್ಞರ ಜೊತೆ ಸಮಾಲೋಚನೆ ಮಾಡಲಾಗಿದೆ. ಎಲ್ಲರ ಅಭಿಪ್ರಾಯದಂತೆ ಕಳೆದ 14 ದಿನಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ, ಮರಣ ದರ ಕಡಿಮೆ ಇದೆ. ಬೀದರ್, ಕಲಬುರಗಿ ಬೆಂಗಳೂರು ಗ್ರಾಮಾಂತರ, ತುಮಕೂರು ಉಡುಪಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ.
ಇದು ಕೊರೊನಾ ಎರಡನೇ ಅಲೆಯ ಮುನ್ಸೂಚನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪಾಸಿಟಿವ್ ಇರೋ ಜಿಲ್ಲೆಯಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.
ಮತದಾರರ ಪಟ್ಟಿ ಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ಹಾಕುವುದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ಸೇರಿದಂತೆ ಕೊರೊನಾ ಹೆಚ್ಚು ಇರುವ ಜಿಲ್ಲೆಗಳಲ್ಲಿ ಕೈಗೊಳ್ಳುವ ಸಲಹೆ ನೀಡಿದೆ ಎಂದರು.
ಸಲಹೆ:
- ಮಾಸ್ಕ್ ಕಡ್ಡಾಯ,
- ಸಾಮಾಜಿಕ ಅಂತರ ಕಡ್ಡಾಯ, ಉಲ್ಲಂಘಿಸಿದಲ್ಲಿ ದಂಡ ಅನಿವಾರ್ಯ.
- ಮದುವೆ, ಸಮಾಜಿಕ ಧಾರ್ಮಿಕ ಕಾರ್ಯಕ್ರಮದಲ್ಲಿ 500 ಸಂಖ್ಯೆ ಮೀರಬಾರದು,
- ಕೊರೊನಾ ಪರೀಕ್ಷೆ ಹೆಚ್ಚಿಸಬೇಕು
- ರೋಗಲಕ್ಷಣ ಇರುವವರಿಗೆ ಪರೀಕ್ಷೆ ಹೆಚ್ಚಿಸಬೇಕು
- ಸಂಪರ್ಕಿತರ ಪತ್ತೆ ಚುರುಕು
- ಕೋವಿಡ್ ಆಸ್ಪತ್ರೆಗಳಲ್ಲಿ, ಆಕ್ಸಿಜನ್, ಐಸಿಯು ಕೋವಿಡ್ ಕೇರ್ ಗೆ ಸಿದ್ದತೆ ಮಾಡಿಕೊಳ್ಳಬೇಕು.
- ಖಾಸಗಿ ಆಸ್ಪತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ವ್ಯವಸ್ಥೆ
- ಹಿರಿಯ ನಾಗರಿಕರಿಗೆ ಲಸಿಕೆ ಚುರುಕು
- ಗ್ರಾಮೀಣ ಪ್ರದೇಶ, ಕೊಳಗೇರಿಯಲ್ಲಿ ಲಸಿಕೆ ಹೆಚ್ಚಿಸಬೇಕು
- ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಜೊತೆ ನೆರವು ಪಡೆದು ಲಸಿಕೆ
- ವಾಹನಗಳಲ್ಲಿ ನಿಗದಿ ಮೀರಿ ಪ್ರಯಾಣಿಕರ ಕರೆದೊಯ್ಯುವುದಕ್ಕೆ ಕಡಿವಾಣ
ಹೆಚ್ಚಿನ ಅರಿವು ಮೂಡಿಸಲು ತೀರ್ಮಾನ
ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ ಇಡಲು ಸಲಹೆ ಬಂದಿದೆ. ಪ್ರಧಾನಿ ಮೋದಿ ಮಾರ್ಚ್ 17 ರಂದು ಎಲ್ಲ ಸಿಎಂ ಜೊತೆ ವೀಡಿಯೋ ಸಂವಾದ ನಡೆಸಲಿದ್ದಾರೆ, ಅವರ ಸಲಹೆ ಪಡೆದು ನಂತರ ಅನಿವಾರ್ಯವಾದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ, ಮತ್ತೊಮ್ಮೆ ಲಾಕ್ ಡೌನ್ ಆಗಬಾರದು ಎನ್ನುವ ಅಪೇಕ್ಷೆ ಇದ್ದರೆ ಕಟ್ಟುನಿಟ್ಟಿನ ಕ್ರಮ ನೀವೇ ಕೈಗೊಳ್ಳಬೇಕು. ಈಗ ಕೊರೊನಾ ಜಾಗೃತಿ ಹೋಗಿದೆ. ಜಾತ್ರೆ, ಸಂತೆಯಲ್ಲಿ ಶೇ 80ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ, ಜನ ಸಹಕಾರ ಕೊಡಬೇಕು, ಜನರ ಸಹಕಾರ ಇಲ್ಲದೆ ಯಶಸ್ವಿ ಆಗಲ್ಲ ಎಂದರು.
ದಂಡ ಹಾಕುವ ಮಟ್ಟಕ್ಕೆ ಜನರು ಹೋಗಬಾರದು, ಒಂದು ವಾರ ಕಾದು ನೋಡುತ್ತೇವೆ ನಂತರ ದಂಡ ಹಾಕುವುದು ಅನಿವಾರ್ಯ. ಕರ್ಫ್ಯೂ ಇತ್ಯಾದಿ ಇಂದು ಚರ್ಚೆ ಆಗಿಲ್ಲ, ಮೋದಿ ಸಭೆ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಸಿದ್ದರಾಮಯ್ಯ