ಬೆಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡವನ್ನು ಕೂಡಲೇ ಇಳಿಕೆ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡದಿಂದ ಜನ ಕಂಗೆಟ್ಟಿದ್ದು, ನೂತನ ದಂಡದಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ದಂಡವನ್ನು ಇಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಸಂಚಾರ ನಿಯಮ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಇಳಿಸುವ ಬಗ್ಗೆ ಗುಜರಾತ್ ಸರ್ಕಾರ ಆದೇಶ ಹೊರಡಿಸಿದ್ದು, ಅದನ್ನು ತರಿಸಿಕೊಂಡು ಪರೀಶಿಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೂತನ ದಂಡಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರತಿಪಕ್ಷಗಳಿಂದಲೂ ಟೀಕೆ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಕೊನೆಗೂ ದಂಡದ ದರ ಇಳಿಕೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.