ಬೆಂಗಳೂರು: ಕೊರೊನಾ ಎರಡನೇ ಅಲೆ ತಡೆಗೆ ರಾಜ್ಯಾದ್ಯಂತ ಲಾಕ್ಡೌನ್ ಜಾರಿಯಾಗಿದ್ದು ಹಲವಾರು ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದಿಂದ 1,250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು.
ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ವಿಧಿಸಿದ್ದಾಗ ಕೊರೊನಾ ಮೊದಲ ಅಲೆಯಲ್ಲಿ ಆರ್ಥಿಕ ಸಹಾಯ ಮಾಡಲಾಗಿತ್ತು. ಅದೇ ರೀತಿ ಈ ಬಾರಿ 1,250 ಕೋಟಿಗೂ ಹೆಚ್ಚು ಪ್ಯಾಕೇಜ್ ನೀಡಿದ್ದಾರೆ. ಶಿಕ್ಷಕರು, ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಸ್ ಇವರನ್ನೆಲ್ಲಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗಿದ್ದು, ಆದ್ಯತೆ ಮೇರೆಗೆ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಪ್ರಧಾನಮಂತ್ರಿ ಗರೀಬ್ ಯೋಜನೆಯಡಿಯಲ್ಲಿ ಪಡಿತರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 180 ಕೋಟಿ ರೂ. ವೆಚ್ಚದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಕಾರ್ಯಕ್ರಮ ನಡೆಸಲಾಗುವುದು. ಮೇ ಮತ್ತು ಜೂನ್ ತಿಂಗಳಲ್ಲಿ 10 ಕೆ.ಜಿ. ಅಕ್ಕಿ ನೀಡಲು ನಿರ್ಧಾರಿಸಲಾಗಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳಿಗೆ 5 ಕೆ.ಜಿ ಅಕ್ಕಿ, ಎಪಿಎಲ್ ಕಾರ್ಡ್ದಾರರಿಗೆ ಕೆಜಿ 15 ರೂ.ಯಂತೆ ಅಕ್ಕಿ ವಿತರಣೆ, ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೂ ಎರಡು ತಿಂಗಳು ಉಚಿತ ಅಕ್ಕಿ ನೀಡಲಿದ್ದೇವೆ ಎಂದು ಹೇಳಿದರು.
2500 ವೈದ್ಯರ ನೇಮಕ: ಸೋಂಕಿತ ರೋಗಿಗಳಿಗೆ ಸರ್ಕಾರದಿಂದ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ 3 ದಿನಗಳಲ್ಲಿ 2500 ವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.
ಮೇ.23 ರಂದು ಲಾಕ್ಡೌನ್ ಮುಂದುವರಿಸುವ ಕುರಿತು ತೀರ್ಮಾನ ಮಾಡುತ್ತೇವೆ. ಪ್ರಸ್ತುತ ಆರ್ಥಿಕ ಪ್ಯಾಕೇಜ್ ಘೋಷಣೆಯಿಂದ 30 ಲಕ್ಷ ಫಲಾನುಭವಿಗಳಿಗೆ ಸಹಾಯವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.