ಬೆಂಗಳೂರು: ಅಪಾರ ದೈವಭಕ್ತಿಯುಳ್ಳ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಕಂಕಣ ಸೂರ್ಯಗ್ರಹಣ, ಮಣ್ಣೆತ್ತಿನ ಅಮವಾಸ್ಯೆ ಆದರೂ ನಿವಾಸದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲಿಲ್ಲ. ನಿವಾಸದಲ್ಲಿ ಇಡೀ ದಿನ ಏಕಾಂಗಿಯಾಗಿ ಕಾಲ ಕಳೆದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಂದಿನ ನಡೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಅಮವಾಸ್ಯೆ, ಹುಣ್ಣಿಮೆಗಳಲ್ಲೇ ವಿಶೇಷ ಪೂಜೆ ಪುನಸ್ಕಾರ ತಪ್ಪಿಸದ ಸಿಎಂ, ಗ್ರಹಣದ ದಿನ ಅಪ್ಪಿತಪ್ಪಿಯೂ ಎಚ್ಚರ ತಪ್ಪಲ್ಲ. ಗ್ರಹಣ ಕಾಲದ ಆಸುಪಾಸಿನಲ್ಲಿ ಪೂಜೆ ಪುನಸ್ಕಾರ ಮಾಡಿಸುತ್ತಿದ್ದರು. ಆದರೆ, ಇಂದು ಅಂತಹ ಚಟುವಟಿಕೆ ಅಧಿಕೃತ ನಿವಾಸ ಕಾವೇರಿಯಲ್ಲಿ ಕಂಡು ಬರಲಿಲ್ಲ.
ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದಿನಂತೆ ವಾಯುವಿಹಾರ ನಡೆಸಿದರು. ನಂತರ ಗ್ರಹಣ ಸಮಯ ಆರಂಭಕ್ಕೂ ಮುನ್ನ ಉಪಹಾರ ಸೇವಿಸಿ ನಿವಾಸದ ಒಳಗೆ ಸೇರಿಕೊಂಡಿದ್ದು ಬಿಟ್ಟರೆ ಇಡೀ ದಿನ ಕಾವೇರಿ ನಿವಾಸ ಬಣಗುಡುತ್ತಿತ್ತು. ಪೂಜೆ ಪುನಸ್ಕಾರದಂತಹ ಯಾವುದೇ ಚಟುವಟಿಕೆ ಕಂಡುಬರಲಿಲ್ಲ. ಬೆಳಗ್ಗೆ ಮನೆ ದೇವರಿಗೆ ಪೂಜೆ ಸಲ್ಲಿಸಿ ಕುಟುಂಬ ಸದಸ್ಯರು ಸಿಎಂ ನಿವಾಸಕ್ಕೆ ಆಗಮಿಸಿ ಪ್ರಸಾದ ನೀಡಿದ್ದು ಬಿಟ್ಟರೆ ಕಾವೇರಿ ಖಾಲಿ ಖಾಲಿಯಾಗಿತ್ತು.
2019 ರ ಜುಲೈನಲ್ಲಿ ಸರ್ಕಾರ ರಚನೆಗೂ ಮುನ್ನ ಇಷ್ಟಾರ್ಥ ಸಿದ್ಧಿ ನೆರವೇರಲು ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ಮಾಡಿಸಿದ್ದರು. ಅದಾದ ಕೆಲ ದಿನಗಳ ನಂತರ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಆದರೂ ರಾಜಕೀಯ ಮೇಲಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಸಿಎಂ ಮಹಾಲಯ ಅಮವಾಸ್ಯೆಯಂದು ಅಂದರೆ 2019 ರ ಸೆಪ್ಟೆಂಬರ್ 28 ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕಾ ದೇವಿ ಮೊರೆ ಹೋಗಿದ್ದರು. ಅಧಿಕಾರ ಉಳಿಸಿಕೊಳ್ಳಲು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು. ನಂತರ 2019 ರ ಡಿಸೆಂಬರ್ 14 ರಂದು ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ನರಸಿಂಹ ಹೋಮ ಮಾಡಿಸಿದ್ದರು.
ಶತ್ರು ನಿಗ್ರಹಕ್ಕಾಗಿ ಈ ಪೂಜೆ ನೆರವೇರಿಸಲಾಗಿತ್ತು. ವಿಶೇಷ ಅಂದರೆ ಡಿಸೆಂಬರ್ 24 ರಂದು ಕೇರಳಕ್ಕೆ ಭೇಟಿ ನೀಡಿ ತಾಳಪರಂಬದ ರಾಜೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ವೃಶ್ಚಿಕ ರಾಶಿಯವರಿಗೆ ಖಂಡಗ್ರಾಸ ಸೂರ್ಯ ಗ್ರಹಣದ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಗ್ರಹಣ ಕಾಲ ಆರಂಭಕ್ಕೂ ಮುನ್ನ ಪೂಜೆ ನೆರವೇರಿಸಿ ಗ್ರಹಣ ದೋಷ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿ ಗ್ರಹಣ ಆರಂಭಕ್ಕೂ ಮೊದಲೇ ವಾಪಸ್ಸಾಗಿದ್ದರು. ನಂತರ ಡಿಸೆಂಬರ್ 25ರಂದು ಖಂಡಗ್ರಾಸ ಸೂರ್ಯ ಗ್ರಹಣ ಮತ್ತು ಅಮಾವಾಸ್ಯೆಯಂದು ನಿವಾಸದಲ್ಲಿ ಪೂಜೆ ಸಲ್ಲಿಸಿ ಇಡೀ ದಿನ ಮನೆಯಲ್ಲಿಯೇ ಇದ್ದರು. ಗ್ರಹಣ ಕಾಲದಲ್ಲಿ ಉಪಹಾರ ಸೇವಿಸದೇ ಪೂಜೆ ನಂತರವೇ ಆಹಾರ ಸೇವನೆ ಮಾಡಿದ್ದರು. ಜೊತೆಗೆ ಗ್ರಹಣದ ನಂತರ ಕಾರುಗಳಿಗೆ ಪೂಜೆ ಸಲ್ಲಿಕೆ ಮಾಡಲಾಗಿತ್ತು.
ಆದರೆ ಹಿಂದಿನ ಗ್ರಹಣಗಳಲ್ಲಿ ಅಷ್ಟೆಲ್ಲಾ ವಿಶೇಷ ಆಸಕ್ತಿ ತೋರಿ ಪೂಜೆ ಮಾಡಿದ್ದ ಸಿಎಂ, ಇಂದಿನ ಕಂಕಣ ಸೂರ್ಯಗ್ರಹಣದ ದಿನ ಅದರಲ್ಲಿಯೂ ಮಣ್ಣೆತ್ತಿನ ಅಮವಾಸ್ಯೆಯಂದು ಮಾತ್ರ ಯಾಕೆ ಇಂತಹ ಧಾರ್ಮಿಕ ಚಟುವಟಿಕೆಯಿಂದ ದೂರ ಉಳಿದರು ಎನ್ನುವುದು ನಿಗೂಢವಾಗಿದೆ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಧಾರ್ಮಿಕ ಚಟುವಟಿಕೆ ಹೆಸರಿನಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸಿಎಂ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ.
ಸಿಎಂಗೃಹ ಕಚೇರಿ, ವಿಧಾನಸೌಧ ಕೂಡ ಕೊರೊನಾ ಕರಿನೆರಳಿಗೆ ಸಿಲುಕುವ ಆತಂಕ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆಸದಿರಲು ನಿರ್ಧರಿಸಿರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಕುಟುಂಬ ಸದಸ್ಯರು ಬಂದು ಹೋಗಿದ್ದು ಬಿಟ್ಟರೆ ಇಡೀ ದಿನ ಮನೆಯಲ್ಲಿ ಸಿಎಂ ಇಬ್ಬರೇ ಕಳೆದರು. ಅತಿಥಿಗಳಾಗಲಿ, ಆಪ್ತರಾಗಲಿ ಯಾರೂ ಆಗಮಿಸಿರಲಿಲ್ಲ. ಟಿವಿ ನೋಡುತ್ತಾ, ಹಾಡು ಕೇಳುತ್ತಾ ಸಿಎಂ ದಿನ ಕಳೆದಿದ್ದಾರೆ. ಆದರೂ ಗ್ರಹಣದ ಕಾಲದಲ್ಲಿ ಉಪಹಾರ ಸೇವನೆ ಮಾಡದೆ ಗ್ರಹಣದ ನಂತರವೇ ಆಹಾರ ಸೇವನೆ ಮಾಡಿದರು ಎಂದು ತಿಳಿದುಬಂದಿದೆ.