ಬೆಂಗಳೂರು : ನಿನ್ನೆ ರಾಜಧಾನಿಯಲ್ಲಿ ಸುರಿದ ಭಾರಿ ಮಳೆಯಿಂದ ಹೊಸಕೆರೆಹಳ್ಳಿ ವಾರ್ಡ್-161ರ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಅನಾಹುತ ಸಂಭವಿಸಿದ್ದು, ಈ ಸ್ಥಳಗಳಿಗೆ ಸಿಎಂ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು.
ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿ ಕೈಗೊಂಡಿರುವ ಸ್ವಚ್ಛತಾ ಮತ್ತು ಪರಿಹಾರ ಕಾರ್ಯ ಕುರಿತು ಪರಿಶೀಲಿಸಿದ ಮುಖ್ಯಮಂತ್ರಿಗಳು, ಈ ಸಂಬಂಧ ಪಾಲಿಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಸ್ಥಳೀಯ ಪ್ರದೇಶದಲ್ಲಿ ಯಾವ ಮನೆಗೆ ನೀರು ನುಗ್ಗಿ, ಬಟ್ಟೆ, ಧವಸ -ಧಾನ್ಯ, ವಸತಿ ನೀರಲ್ಲಿ ತೊಯ್ದು ಹಾಳಾಗಿದೆ ಅಂತಹ ಮನೆಗಳನ್ನು ಗುರುತಿಸಿ 25,000 ರೂ. ಚೆಕ್ ಅನ್ನು ಇಂದು ಸಂಜೆಯಿಂದಲೇ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಭಾಗದಲ್ಲಿ ಸುಮಾರು 650 ರಿಂದ 700 ಮನೆಗಳಿದ್ದು, ಅನಾಹುತಕ್ಕೆ ಒಳಗಾದ ಎಲ್ಲಾ ಮನೆಗಳಿಗೂ ಪರಿಹಾರ ನೀಡಲಾಗುತ್ತದೆ. ರಾಜಕಾಲುವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಜಲಾವೃತ ಆಗದ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿ ಯಾವುದೇ ರೀತಿಯ ಅನಾಹುತಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ತೆರವು ಕಾರ್ಯಾಚರಣೆ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರು(ಯೋಜನೆ) ಮನೋಜ್ ಜೈನ್, ಮುಖ್ಯ ಅಭಿಯಂತರರು(ಬೃಹತ್ ನೀರುಗಾಲುವೆ) ಪ್ರಹ್ಲಾದ್, ವಲಯ ಜಂಟಿ ಆಯುಕ್ತರು ವೀರಭದ್ರ ಸ್ವಾಮಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.