ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ನಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಛಾಯಾಚಿತ್ರಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಟಿ ತಾರಾ ವೀಕ್ಷಿಸಿದರು.
ರಾಜ್ಯದ ನಾನಾ ಪತ್ರಿಕೆಗಳ ಛಾಯಾಗ್ರಾಹಕರು ಸೆರೆ ಹಿಡಿದಿರುವ ಪ್ರವಾಹ ಚಿತ್ರಗಳು, ಜನರು, ಪ್ರಾಣಿಗಳ ಬವಣೆಯ ಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ಇದೇ ವೇಳೆ ಕರ್ನಾಟಕ ರಾಜ್ಯ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನೆಯನ್ನೂ ಮಾಡಲಾಯಿತು.
ಪ್ರವಾಹದ ಚಿತ್ರಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಸಿಎಂ, ಸಾವಿರ ಪದಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತದೆ. ಮಾತಿನಲ್ಲಿ ಹೇಳಲಾಗದ್ದನ್ನು ಚಿತ್ರದಲ್ಲಿ ವ್ಯಕ್ತಪಡಿಸಬಹುದು. ಪ್ರವಾಹ ಪರಿಸ್ಥಿತಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಫೋಟೋಗಳನ್ನು ಗಮನಿಸಿದ್ರೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೋದು ಗೊತ್ತಾಗುತ್ತದೆ. ಎಲ್ಲಾ ಛಾಯಾಗ್ರಾಹಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸದ್ಯಕ್ಕೆ ದೆಹಲಿಗೆ ಹೋಗುವುದಿಲ್ಲ ಎಂಬ ವಿಚಾರ ಸ್ಪಷ್ಟಪಡಿಸಿದರು.
ಇನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಮಾತನಾಡಿ, ರವಿ ಕಾಣದ್ದು, ಕವಿ ಕಾಣದ್ದನ್ನೂ ಕ್ಯಾಮರಾ ಕಂಡಿದೆ. ತಂತ್ರಜ್ಞಾನ ಅಷ್ಟು ಮುಂದುವರೆದಿದೆ ಎಂದು ಹೇಳಿದರು. ಪ್ರವಾಹದ ಚಿತ್ರಣಗಳನ್ನು ನೋಡಿದ್ರೆ ಕರುಳು ಚುರುಕ್ ಅನ್ನುತ್ತದೆ. ಜನರ ಕಷ್ಟಗಳಿಗೆ ಮಾತೃ ಹೃದಯ ಇರುವ ಸಿಎಂ ಹಾಗೂ ಸರ್ಕಾರ ತಕ್ಷಣ ಪರಿಹಾರ ಕೊಡುವ ಕೆಲಸ ಮಾಡುತ್ತದೆ ಎಂದರು. ಇದೇ ವೇಳೆ ಜಿಲ್ಲಾ ಛಾಯಾಗ್ರಾಹಕರಿಗೆ ಸನ್ಮಾನ ಮಾಡಲಾಯಿತು.