ಬೆಂಗಳೂರು: ಸಿಎಂ ಯಡಿಯೂರಪ್ಪ ಉಪ ಸಮರದ ಅಖಾಡಕ್ಕೆ ಇಳಿಯುತ್ತಿದ್ದು, ಹೊಸಕೋಟೆಯಿಂದ ತಮ್ಮ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ರೆಬೆಲ್ ಬಿಜೆಪಿಗೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ವಲಸೆ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ. ಹೊಸಕೋಟೆ ಕ್ಷೇತ್ರ ಪ್ರತಿಷ್ಠೆ ಹಾಗೂ ಸವಾಲಿನ ಕಣವಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಸೋಮವಾರ ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಂಟಿಬಿ ಪರ ಮತಯಾಚನೆ ಮಾಡಲಿದ್ದಾರೆ.
ಈಗಾಗಲೇ ಎಂಟಿಬಿ ಹೊಸಕೋಟೆಗೆ ಪ್ರಚಾರಕ್ಕೆ ಬರುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಇದೀಗ ಸಿಎಂ ಯಡಿಯೂರಪ್ಪ ತಮ್ಮ ಮೊದಲ ಉಪಸಮರದ ಪ್ರಚಾರ ಕಾರ್ಯವಾಗಿ ಹೊಸಕೋಟೆಯ ರಣಕಣಕ್ಕೆ ಇಳಿಯಲಿದ್ದಾರೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಮತ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಬಿಜೆಪಿ ರೆಬೆಲ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಮನವೊಲಿಕೆ ಯತ್ನ ವಿಫಲವಾಗುತ್ತಿದ್ದರೆ, ಅತ್ತ ಜೆಡಿಎಸ್ ಶರತ್ ಬಚ್ಚೇಗೌಡಗೆ ಬೆಂಬಲ ನೀಡಲು ಮುಂದಾಗಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಎಂಟಿಬಿ ನಾಗರಾಜ್ ಗೆ ಹಿನ್ನಡೆಯಾಗುವ ಸಾಧ್ಯತೆ ಇರುವ ಕಾರಣ ಸಿಎಂ ಬಿಎಸ್ವೈ ಹೊಸಕೋಟೆಯ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಶರತ್ ಬಚ್ಚೇಗೌಡರಿಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದ್ದಾರೆ.