ಬೆಂಗಳೂರು : ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟು 8,071 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಸಿಎಂ ಯಡಿಯೂರಪ್ಪ ಕೇಂದ್ರ ಅಧ್ಯಯನ ತಂಡಕ್ಕೆ ವಿವರಿಸಿದರು.
ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಗೆಂದು ಆಗಮಿಸಿರುವ ಕೇಂದ್ರ ಗೃಹ ಮಂತ್ರಾಲಯದ ಕೆ ವಿ ಪ್ರತಾಪ್ ನೇತೃತ್ವದ ತಂಡ ಇಂದು ಸಿಎಂರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು. ಈ ವೇಳೆ ಸಿಎಂ 2018 ಮತ್ತು 2019ರಲ್ಲಿಯೂ ರಾಜ್ಯದಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದರು.
'ಉತ್ತಮವಾಗಿ ಮರುನಿರ್ಮಿಸು’ ತತ್ವವನ್ನು ಆಧರಿಸಿ ವಿಕೋಪವನ್ನು ತಡೆಯಬಲ್ಲ ಮನೆಗಳನ್ನು ನಿರ್ಮಿಸುವ ಬಹು ದೊಡ್ಡ ಪುನರ್ ನಿರ್ಮಾಣ ಯೋಜನೆಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ ಎಂದ ಸಿಎಂ, ಸಂಪೂರ್ಣ ಹಾಳಾದ ಮನೆಗಳಿಗೆ ರೂ. 5 ಲಕ್ಷ, ತೀವ್ರ ಹಾನಿಗೊಳಗಾದ ಮನೆಗಳಿಗೆ ರೂ.3 ಲಕ್ಷ, ಭಾಗಶ: ಹಾನಿಗೊಳಗಾದ ಮನೆಗಳಿಗೆ ರೂ.50,000 ಗಳಂತೆ ಧನ ಸಹಾಯ ನೀಡುತ್ತಿದೆ. ಕಳೆದ ವರ್ಷ 1500 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಈ ವರ್ಷವೂ ಸಹ ಕೋವಿಡ್ ಸಂಕಷ್ಟದ ನಡುವೆಯೂ 200 ಕೋಟಿ ರೂ. ಸರ್ಕಾರ ಭರಿಸಲಿದೆ ಎಂದರು.
ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ, ನಾಲ್ಕು ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು ಕೇಂದ್ರ ಸರ್ಕಾರ ಸೃಜಿಸಿದೆ. ಆದರೆ, ಕೋವಿಡ್‌ನಿಂದಾಗಿ ನಮ್ಮ ಪ್ರಯತ್ನಗಳಿಗೆ ತಡೆಯುಂಟಾಗಿದೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಪ್ರಾಧಿಕಾರವು ರಾಜ್ಯ ವಿಕೋಪ ನಿರ್ವಹಣಾ ಯೋಜನೆ 2020 ಅನುಮೋದಿಸಿದ್ದು, ಯೋಜನೆಯು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಪುನರ್ ನಿರ್ಮಾಣದ ಯೋಜನೆಗಳನ್ನು ಹೊಂದಿದೆ ಎಂದು ವಿವರಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಹಾಗೂ ಪ್ರವಾಹಕ್ಕಾಗಿ ರಾಜ್ಯ ವಿಕೋಪ ಪರಿಹಾರ ನಿಧಿಯಡಿ 460 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಮೊತ್ತದ ಅಗತ್ಯವಿದೆ ಎಂದು ಸಿಎಂ ವಿವರಿಸಿದರು. ರಾಜ್ಯ ವಿಕೋಪ ಪರಿಹಾರ ನಿಧಿ/ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ ನೆರವು ಒದಗಿಸುವ ಮಾರ್ಗಸೂಚಿಗಳು ಈ ವರ್ಷವೇ ಪರಿಷ್ಕರಣೆಯಾಗಬೇಕಿದೆ.
ಕೂಡಲೇ ಇದನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಹೆಚ್ಚಿನ ಮೊತ್ತ ಬಿಡುಗಡೆ ಮಾಡುವಂತೆ ಕೇಂದ್ರ ತಂಡಕ್ಕೆ ಮನವಿ ಮಾಡಿದರು. ಕೇಂದ್ರ ಆರ್ಥಿಕ ಇಲಾಖೆಯ ನಿರ್ದೇಶಕ ಡಾ.ಭರತೇಂದ್ರ ಕುಮಾರ್ ಸಿಂಗ್, ಕೃಷಿ ಮತ್ತು ರೈತರ ಸಹಕಾರ ಸಚಿವಾಲಯದ ನಿರ್ದೇಶಕ ಡಾ.ಮನೋಹರನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಗುರುಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ ಪಿ ರಾಜ್‌ವೇದಿ, ಸಚಿವರಾದ ಗೋವಿಂದ ಕಾರಜೋಳ,ಆರ್ ಅಶೋಕ್, ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್, ವಿ. ಸೋಮಣ್ಣ, ಎನ್.ಗೋಪಾಲಯ್ಯ, ಮಾಧುಸ್ವಾಮಿ, ಮುಖ್ಯಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.