ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಅಸಮರ್ಪಕವಾಗಿದ್ದು, ಪಾಲಿಕೆ ಅಧಿಕಾರಿಗಳಿಗೆ ಪರಿಣಾಮಕಾರಿಯಾಗಿ ಕಸದ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಇದೀಗ ಸಿಎಂ ಯಡಿಯೂರಪ್ಪನವರೇ ಖುದ್ದು ಫೀಲ್ಡಿಗಿಳಿಯಲು ಮುಂದಾಗಿದ್ದಾರೆ.
ಹೌದು, ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಕಸ ವಿಲೇವಾರಿ ಬಗ್ಗೆ ತಪಾಸಣೆ ನಡೆಸಲು ನಗರ ಪ್ರದಕ್ಷಿಣೆ ನಡೆಸಲಿದ್ದಾರೆ. ಅಸಲಿಗೆ ಅದು ಸಪ್ರೈಸ್ ವಿಸಿಟ್ ಆಗಿರುತ್ತದೆ. ನಗರದಲ್ಲಿ ಕಸ ವಿಲೇವಾರಿ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಲಿಕೆ ಮೇಯರ್ ಸೇರಿದಂತೆ ಅಧಿಕಾರಿಗಳು ಕಸ ವಿಲೇವಾರಿ ಸಂಬಂಧ ತಪಾಸಣೆ ನಡೆಸಿದರೂ ಅದು ನಿರೀಕ್ಷಿತ ಮಟ್ಟದ ಫಲ ನೀಡುತ್ತಿಲ್ಲ. ನಗರದಲ್ಲಿ ಕಸದ ಸಮಸ್ಯೆ ಹಾಗೇ ಮುಂದುವರಿದಿದೆ. ಅದಕ್ಕಾಗಿಯೇ ಈ ಬಾರಿ ಸ್ವತ: ಸಿಎಂ ಸಾಹೇಬರೇ ಫೀಲ್ಡಿಗಿಳಿದು ತಪಾಸಣೆ ನಡೆಸಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಲ್ಲಿಗೆ ಸಪ್ರೈಸ್ ವಿಸಿಟ್?:
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಸಿಎಂ ಯಡಿಯೂರಪ್ಪ ಬೆಳ್ಳಂಬೆಳಗ್ಗೆ ಕಸ ವಿಲೇವಾರಿ ಸಂಬಂಧ ನಗರದಲ್ಲಿ ಸಪ್ರೈಸ್ ವಿಸಿಟ್ ನೀಡಲು ಚಿಂತನೆ ನಡೆಸಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಏಳು ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಲು ಚಿಂತನೆ ನಡೆದಿದೆ. ಅದರ ಜತೆಗೆ ಬೆಳಗ್ಗೆ ನಗರದ ವಿವಿಧೆಡೆ ಅಚಾನಕ್ ವಿಸಿಟ್ ಕೊಟ್ಟು ಕಸ ವಿಲೇವಾರಿಯನ್ನು ತಪಾಸಣೆ ಮಾಡಲಿದ್ದಾರೆ.
ನಗರದಲ್ಲಿನ ಬ್ಲ್ಯಾಕ್ ಸ್ಪಾಟ್, ಕಸದ ರಾಶಿ ಇರುವ ಪ್ರದೇಶಗಳಿಗೂ ಭೇಟಿ ನೀಡಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಲು ಸಿಎಂ ಮುಂದಾಗಿದ್ದಾರೆ. ಆ ಮೂಲಕ ನಗರದ ಕಸ ವಿಲೇವಾರಿಯನ್ನು ಸರಿಯಾದ ದಾರಿಗೆ ತರಲು ಸಿಎಂ ಯೋಜಿಸಿದ್ದಾರೆ.
ವಾಕರ್ಸ್ ಜತೆ ವಾಕ್ ಅಂಡ್ ಟಾಕ್!:
ಇದರ ಜತೆಗೆ ಸಿಎಂ ಯಡಿಯೂರಪ್ಪ ಅವರು ಬೆಳಗ್ಗೆ ನಗರದ ವಿವಿಧ ಪಾರ್ಕ್ ಗಳಿಗೆ ಭೇಟಿ ನೀಡಿ, ವಾಕರ್ಸ್ ಹಾಗೂ ಸ್ಥಳೀಯರ ಜತೆ ಸಂವಾದ ನಡೆಸಲೂ ಯೋಜಿಸಿದ್ದಾರೆ.
ಬೆಳಗ್ಗೆ ಪಾರ್ಕ್ ಗಳಿಗೆ ಭೇಟಿ ನೀಡಿ ಅವರ ಜತೆ ವಾಕ್ ಮಾಡುವುದರೊಂದಿಗೆ ಸ್ಥಳೀಯ ಸಮಸ್ಯೆಗಳು, ಸಲಹೆಗಳನ್ನು ಪಡೆಯಲು ಮುಂದಾಗಿದ್ದಾರೆ. ಆ ಮೂಲಕ ಆ ಪ್ರದೇಶದ ಸಮಸ್ಯೆಗಳನ್ನು ಅರಿಯಲು ಚಿಂತನೆ ನಡೆಸಿದ್ದಾರೆ. ಜೊತೆಗೆ ಬೆಂಗಳೂರು ನಿವಾಸಿಗಳೊಂದಿಗೆ ಹೆಚ್ಚಿನ ಸಂವಾದ ನಡೆಸಲು ಸಿಎಂ ಚಿಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾರ್ಕ್ ಭೇಟಿ ವೇಳೆ ಸ್ಥಳೀಯ ಶಾಸಕರು, ಸಚಿವರನ್ನು ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.