ಬೆಂಗಳೂರು: ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನು ಬೇರ್ಪಡಿಸಿ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಅಭಿವೃದ್ಧಿ ಕುರಿತಂತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಾಸನ-ಚಿಕ್ಕಮಗಳೂರು ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಚಿಕ್ಕಮಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದರು, ಎಲ್ಲ ಶಾಸಕರು ಸಿಎಂ ಜೊತೆ ವಿಶೇಷ ಸಭೆ ನಡೆಸಿದ್ದೇವೆ. ಸಂಸದರ ವಿಶೇಷ ಕಾಳಜಿಯಿಂದಾಗಿ ಜಿಲ್ಲೆಯಲ್ಲಿ ನನೆಗುದಿಗೆಗೆ ಬಿದ್ದಿದ್ದ ಹಲವು ವಿಷಯಗಳಿಗೆ ಚಾಲನೆ ಕೊಡಲಾಗಿದೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಉನ್ನತೀಕರಣ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಚಿಕ್ಕಮಗಳೂರಿನ ಹಲವು ಹಳ್ಳಿಗಳಲ್ಲಿ ಶಾಶ್ವತ ಕುಡಿವ ನೀರು ಯೋಜನೆ, ಅರಣ್ಯ ಮತ್ತು ಕಂದಾಯ ವಿಷಯಕ್ಕೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲು ಸಿಎಂ ಸಮ್ಮತಿ ನೀಡಿದ್ದಾರೆ. ಹಾಲು ಒಕ್ಕೂಟವನ್ನು ಹಾಸನದಿಂದ ಪ್ರತ್ಯೇಕ ಮಾಡಲು ಸಿಎಂ ಸೂಚನೆ ಕೊಟ್ಟಿದ್ದು, ತಕ್ಷಣ ಹಾಸನ ಹಾಲು ಒಕ್ಕೂಟದಲ್ಲಿ ನಿರ್ಣಯ ಕೈಗೊಂಡು ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದರು.
ನೆರೆಹಾವಳಿಯಿಂದ ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಇತರ ಭಾಗಗಳಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸುವ ಸಂಬಂಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.