ಬೆಂಗಳೂರು : ಭಾರತೀಯ ಭೌತಶಾಸ್ತ್ರ ಉಪನ್ಯಾಸಕರ ಒಕ್ಕೂಟ ನಡೆಸುತ್ತಿರುವ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ (NSE)ಯಲ್ಲಿ ಕನ್ನಡ ಮಾಧ್ಯಮ ಸೇರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಭೌತಶಾಸ್ತ್ರ ಉಪನ್ಯಾಸಕರ ಒಕ್ಕೂಟ ನಡೆಸುವ ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ರಾಷ್ಟ್ರೀಯ ಪ್ರಮಾಣಿತ ಪರೀಕ್ಷೆ (NSE)ಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುವ ಆಯ್ಕೆ ನೀಡದಿರುವುದರಿಂದ ನಮಗೆ ನೋವಾಗಿದೆ. NSE ಭೌತಶಾಸ್ತ್ರ, ಕೆಮಿಸ್ಟ್ರಿ, ಜೀವಶಾಸ್ತ್ರ ಮತ್ತು ಖಗೋಳಶಾಸ್ತ್ರ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡಬೇಕು. ಕನ್ನಡ ಭಾರತ ಸಂವಿಧಾನದ 8ನೇ ಅನುಚ್ಛೇದದಡಿ ಪಟ್ಟಿ ಮಾಡಲಾದ ಆರು ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗಾಗಿ ಅನುಕೂಲವಾಗುವಂತೆ ಪರೀಕ್ಷೆ ಬರೆಯಲು ಕನ್ನಡ ಮಾಧ್ಯಮವನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ನಿಮ್ಮನ್ನು ಕೋರುತ್ತೇನೆ. ಆ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಅದರಿಂದ ಅವರ ವೈಜ್ಞಾನಿಕ ಕಲಿಕೆಗಳನ್ನು ಕಲಿಯಲು ಹೆಚ್ಚಿನ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ನೀವು ಪರಿಶೀಲನೆ ನಡೆಸುವ ನಿರೀಕ್ಷೆ ಇದ್ದು, ಮುಂಬರುವ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಸೂಕ್ತ ಬದಲಾವಣೆ ಮಾಡುತ್ತೀರಿ ಎಂಬ ವಿಶ್ವಾಸ ಇದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವ ಆಶಾಭಾವನೆ ಇದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಚಿವ ಮಧು ಬಂಗಾರಪ್ಪಗೆ ಸುರೇಶ್ ಕುಮಾರ್ ಪತ್ರ : ಶಾಲಾ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆಗಳು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯಲು ಬಿಜೆಪಿ ಸರ್ಕಾರ ಆರಂಭಿಸಿದ್ದ ವಾಟರ್ ಬೆಲ್ ಯೋಜನೆಯನ್ನು ಸಮರ್ಥವಾಗಿ, ಸಮಗ್ರವಾಗಿ ಮರು ಜಾರಿಗೊಳಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ (ಆಗಸ್ಟ್ 14-2023)ರಂದು ಪತ್ರ ಬರೆದಿದ್ದರು.
ಕೇರಳ ಸರ್ಕಾರವು ಶಾಲೆಗಳಲ್ಲಿ 'ವಾಟರ್ ಬೆಲ್' ಪರಿಕಲ್ಪನೆಯನ್ನು ಮರುಜಾರಿಗೊಳಿಸಿದೆ ಎನ್ನುವ ಮಾಧ್ಯಮ ವರದಿಗಳನ್ನು ಗಮನಿಸಿದ್ದೇನೆ. ಇದು ನಮ್ಮ ವಿದ್ಯಾರ್ಥಿಗಳ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸರ್ಕಾರಿ ಶಾಲೆಗಳ ಮಕ್ಕಳ ಉತ್ತಮ ಆರೋಗ್ಯದ ದೃಷ್ಟಿಯಿಂದ ನಮ್ಮ ಸರ್ಕಾರವು ಆದ್ಯತೆಯ ಕ್ರಮವಾಗಿ ಕಾಣಬೇಕಾದ ವಿಷಯವಾಗಿದೆ. ಈ ಪ್ರಯೋಗವನ್ನು ನಾನು 2019 ರಲ್ಲಿ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿಯೇ ಕೈಗೊಂಡಿದ್ದೆ ಎಂದಿದ್ದರು.
ಇದನ್ನೂ ಓದಿ: 'ಶಾಲೆಗಳಲ್ಲಿ ವಾಟರ್ ಬೆಲ್ ಯೋಜನೆ ಪುನರಾರಂಭಿಸಿ': ಸಚಿವ ಮಧು ಬಂಗಾರಪ್ಪಗೆ ಸುರೇಶ್ ಕುಮಾರ್ ಪತ್ರ