ಬೆಂಗಳೂರು: ಸರ್ಕಾರಿ ಸೇವೆಗಳನ್ನು ಪಡೆಯಲು ತಾಲೂಕು ಕಚೇರಿಗೆ ಅಲೆದಾಡುವುದು ತಪ್ಪಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೆ ಜನರು ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯತ್ನಲ್ಲೇ ಒಂದೇ ಸೂರಿನಡಿ ಎಲ್ಲ ಸೇವೆ ಕೊಡುವ ಗ್ರಾಮ ಒನ್ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು, ಜಿಲ್ಲಾಧಿಕಾರಿಗಳು ನೇತೃತ್ವವಹಿಸಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಯೋಜನೆಯಾಗಿರುವ ಗ್ರಾಮ ಒನ್ ಯೋಜನೆಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಸಿಗೆ ನೀರೆರೆಯುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಹಲವು ಅನುಕೂಲ ಒದಗಿಸುವ ಯೋಜನೆಗೆ ಚಾಲನೆ ನೀಡಿದರು. ಸದ್ಯಕ್ಕೆ 12 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಬೀದರ್, ಕೊಪ್ಪಳ , ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾಗಿದೆ.
ನಂತರ ಮಾತನಾಡಿದ ಸಿಎಂ, ನಗರ ಪ್ರದೇಶಗಳಲ್ಲಿ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಕೊಡುವ ಕೆಲಸ ಪ್ರಾರಂಭವಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲೂ ಕೂಡ ಹಲವಾರು ಸೇವೆಗಳ ಅವಶ್ಯಕತೆ ಇದೆ. ಕೃಷಿ ಚಟುವಟಿಕೆ, ತೋಟಗಾರಿಕೆ ಚಟುವಟಿಕೆ, ಕಂದಾಯ ಇಲಾಖೆಯಲ್ಲಿ ಹಾಗೂ ಅದಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಯಲ್ಲಿ ಆಧಾರ್ ಕಾರ್ಡ್, ವಿತರಣೆ ಪಡಿತರ ಚೀಟಿ ವಿತರಣೆ ಈ ರೀತಿ ಹಲವಾರು ಸೇವೆಗಳನ್ನು ಗ್ರಾಮ ಒನ್ ಮೂಲಕ ಕೊಡಬಹುದು. ತಾಲೂಕು ಕಚೇರಿಯಲ್ಲಿ ಬಹಳ ದೊಡ್ಡ ಜನಸಂದಣಿ ಇರುತ್ತದೆ. ಹಾಗಾಗಿ ಅದನ್ನು ಒಂದೇ ಸೂರಿನಡಿ ಗ್ರಾಮಮಟ್ಟದಲ್ಲೇ ಗ್ರಾಮಸ್ಥರಿಗೆ ಒದಗಿಸಬೇಕು, ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ, ಗ್ರಾಮಸ್ಥರು ಪಂಚಾಯಿತಿಗಳಲ್ಲಿ ಕುಳಿತುಕೊಂಡು ಸೇವೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ತಾಲೂಕು ಕಚೇರಿಗೆ ಜನರ ಓಡಾಟ, ಹೆಚ್ಚಿನ ಖರ್ಚು ಮಾಡುವುದು ತಪ್ಪಲಿದೆ. ಯಾವುದೇ ಮಧ್ಯವರ್ತಿ ಇಲ್ಲದೆ ಅವರ ಸ್ಥಳದಲ್ಲೇ ಸೇವೆ ಸಿಗಬೇಕು ಎಂದು ಈ ಯೋಜನೆ ಮಾಡಿರುವುದಾಗಿ ತಿಳಿಸಿದರು.
ಜನರ ವಿಶ್ವಾಸ ಪುನರ್ ಸ್ಥಾಪನೆ: ಈ ಯೋಜನೆ ಸಫಲವಾಗಬೇಕಾದಲ್ಲಿ ತಂತ್ರಜ್ಞಾನ ಬಹಳ ಸಮರ್ಥ, ಸದೃಢವಾಗಬೇಕು. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್, ಬ್ಯಾಕಪ್ ಪವರ್, ಬ್ಯಾಟರಿ ಎಲ್ಲವನ್ನೂ ಯೋಜನೆ ಮಾಡಿ ಯಾರಿಗೂ ತೊಂದರೆ ಆಗದಂತೆ ಸೌಲಭ್ಯ ಕಲ್ಪಿಸಿ ಯೋಜನೆ ರೂಪಿಸಲಾಗಿದೆ. 12 ಜಿಲ್ಲೆಗಳ 3026 ಗ್ರಾಮ ಪಂಚಾಯತ್ಗಳಲ್ಲಿ ಸೇವೆ ಆರಂಭಿಸಲಾಗಿದೆ. ಇದರ ಪೂರ್ವದಲ್ಲಿ ಬಹಳ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಿ ನೋಡಿ ಸಮಸ್ಯೆ ನಿವಾರಣೆ ಮಾಡಿ, ಇರುವ ವ್ಯವಸ್ಥೆ ಸರಿಮಾಡಿ, ವ್ಯವಸ್ಥಿತ ರೀತಿಯಾಗಿ ಸೇವೆ ಒದಗಿಸಲು ಏನೆಲ್ಲಾ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡಿಯೇ ಯೋಜನೆ ಜಾರಿ ತರಲಾಗಿದೆ. ಜನರಿಗೆ ನಮ್ಮ ಸೇವೆ ಮುಟ್ಟಬೇಕು, ಕ್ರಾಂತಿಕಾರಿ ಬದಲಾವಣೆಯಾಗಬೇಕು, ತಳಮಟ್ಟದಲ್ಲಿ ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ತಲುಪಬೇಕು, ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈ ವ್ಯವಸ್ಥೆ ಮೂಲಕ ಮತ್ತೆ ಜನರ ವಿಶ್ವಾಸ ಪುನರ್ ಸ್ಥಾಪನೆ ಮಾಡುವ ಚಿಂತನೆ ಈ ಯೋಜನೆಯದ್ದಾಗಿದೆ ಎಂದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಶುದ್ಧ ಸುಳ್ಳು, ಇದು ಮಾಧ್ಯಮಗಳ ಸೃಷ್ಟಿ: ಸಿಎಂ ಬೊಮ್ಮಾಯಿ
ಸ್ವರಾಜ್ಯದಿಂದ ಸುರಾಜ್ಯದೆಡೆ: ಮಹಾತ್ಮ ಗಾಂಧಿ ಪರಿಕಲ್ಪನೆಯ ಗ್ರಾಮ ಸ್ವರಾಜ್ಯ, ಅಟಲ್ ಬಿಹಾರಿ ವಾಜಪೇಯಿ ಚಿಂತನೆಯ ಗ್ರಾಮ ಸುರಾಜ್ಯ ಅನುಸರಿಸಿ ಸ್ವರಾಜ್ಯದಿಂದ ಸುರಾಜ್ಯದೆಡೆಗೆ ಎನ್ನುವಂತೆ ಈ ಗ್ರಾಮ ಒನ್ ಸೇವೆ ಒದಗಿಸುವ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಆಧುನಿಕ ತಂತ್ರಜ್ಞಾನ ಬಳಕೆ ಜನರ ಪರವಾಗಿರಬೇಕು. ಜನರಿಗೋಸ್ಕರವಿರಬೇಕು, ಜನರ ಕಲ್ಯಾಣಕ್ಕಿರಬೇಕು, ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ಸಿಎಂ ಹೇಳಿದರು.
ಹಕ್ಕುಪತ್ರ, ಕಂದಾಯ ಪತ್ರ, ಸಂಧ್ಯಾ ಸುರಕ್ಷಾ, ಮಾಸಾಶನ, ಜಾತಿ, ಆದಾಯ ಪ್ರಮಾಣಪತ್ರ, ಆಹಾರ ವಿತರಣೆ, ಪಡಿತರ, ಆಧಾರ್ ಕಾರ್ಡ್, ಬ್ಯಾಂಕ್ ಸೇವೆ ಹೀಗೆ ಹಲವಾರು ಸೇವೆಗಳನ್ನು ಇದರ ಮುಖಾಂತರ ವಿತರಣೆ ಮಾಡಲಾಗುತ್ತದೆ. ಮುಖ್ಯವಾದ ಸೇವೆಗೆ ಆದ್ಯತೆ ನೀಡಿ ದಕ್ಷ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂದು ಯೋಜನೆಯ ಆರಂಭ ಮಾತ್ರ. ಇದು ಯಶಸ್ವಿಯಾದಾಗ ಸಮಾಧಾನವಾಗಲಿದೆ, ಸಣ್ಣಪುಟ್ಟ ತೊಂದರೆ ನಿವಾರಣೆ ಮಾಡಿ ಯೋಜನೆ ಯಶಸ್ವಿ ಮಾಡಬೇಕು ಎಂದು ಕರೆ ನೀಡಿದರು.
ಸಚಿವರಿಗೆ ಜವಾಬ್ದಾರಿ: ಜನಪ್ರತಿನಿಧಿಗಳು ಗ್ರಾಮ ಒನ್ ಬಗ್ಗೆ ಜನರಿಗೆ ತಿಳಿಹೇಳಿ ಸಹಕಾರ ಕೊಡಬೇಕು, ಸಚಿವರು ಈಗ ಆಸಕ್ತಿ ತೋರಿದ್ದು, ಇದೇ ಆಸಕ್ತಿ ಮುಂದುವರೆಸಬೇಕು, ಸಚಿವರು ಪ್ರವಾಸಕ್ಕೆಂದು ಹೋದಲ್ಲೆಲ್ಲಾ ಗ್ರಾಮ ಒನ್ ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ: ಈಗಾಗಲೇ 6 ಲಕ್ಷಕ್ಕಿಂತ ಅಧಿಕ ಅರ್ಜಿಗಳನ್ನು ಪ್ರಾಯೋಜಿಕದ ವೇಳೆಯಲ್ಲಿ ಪಡೆದುಕೊಂಡು ಸೇವೆ ಕೊಟ್ಟಿದ್ದೇವೆ. ಹಾಗಾಗಿ ಈಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇವೆ ಪಡೆಯಲು ಬರಲಿದ್ದಾರೆ. ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳ ಸಹಕಾರ ಮುಖ್ಯ, ಆನ್ ಲೈನ್ ನಲ್ಲಿ ಅರ್ಜಿ ತೆಗೆದುಕೊಂಡಾಗ ಅಗತ್ಯ ಮಂಜೂರಾತಿ ಕೊಟ್ಟಲ್ಲಿ ಮಾತ್ರ ಸೇವೆ ಲಭ್ಯವಾಗಲಿದೆ. ಹಾಗಾಗಿ ಡಿಸಿ ನಾಯಕತ್ವ ವಹಿಸಿ ತಾಲೂಕು ಕಚೇರಿಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳು ಇದನ್ನು ಅತಿ ಹೆಚ್ಚು ಮಹತ್ವದ ಯೋಜನೆ ಎಂದು ಪರಿಗಣಿಸಬೇಕು. ಸುಲಭವಾಗಿ ಸರ್ಕಾರಿ ಸೇವೆಯನ್ನು ಜನರಿಗೆ ತಲುಪಿಸೋಣ, ಜನರ ಮನದಲ್ಲಿ ಈ ಯೋಜನೆ ಉಳಿಯುವಂತೆ ಮಾಡೋಣ ಎಂದು ಕರೆ ನೀಡಿದರು.