ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಅತಿ ಹೆಚ್ಚು ಹಾನಿಗೀಡಾದ ಹೊಸಕೆರೆಹಳ್ಳಿ ಪ್ರದೇಶಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ನೆರೆಪೀಡಿತ ಪ್ರದೇಶದಲ್ಲಿನ ಸ್ಥಳೀಯರ ಆಕ್ರೋಶವನ್ನು ಎದುರಿಸಬೇಕಾಯಿತು.
ಜೋರು ಮಳೆಯಿಂದ ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ಭಾಗ ಅಕ್ಷರಶಃ ಮುಳುಗಿ ಹೋಗಿತ್ತು. ಹೀಗಾಗಿ ಕಳೆದ ರಾತ್ರಿಯಿಂದ ಸಚಿವ ಆರ್.ಅಶೋಕ್ ಕಾರ್ಯಪ್ರವೃತ್ತರಾಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ ಮಳೆಯ ಹಾನಿಯ ತೀವ್ರತೆಯನ್ನು ಅರಿತ ಸಿಎಂ ಕಾವೇರಿ ನಿವಾಸದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಂಡು ಕಟ್ಟೆಚ್ಚರದಲ್ಲಿ ಇರುವಂತೆ ಸೂಚಿಸಿದರು. ಮನೆಯಿಂದ ಬಟ್ಟೆ, ಪಾತ್ರೆ, ಪೀಠೋಪಕರಣ ಹಾನಿಗೀಡಾದ ಹಿನ್ನೆಲೆ ತಕ್ಷಣ 25,000 ರೂ. ಪರಿಹಾರ ನೀಡಲು ನಿರ್ಧರಿಸಲಾಯಿತು.
ಸ್ಥಳೀಯರ ಆಕ್ರೋಶ:
ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸಿಎಂ, ಆರ್.ಅಶೋಕ್ ಜತೆಗೂಡಿ ಮಳೆ ಹಾನಿ ಪ್ರದೇಶವಾದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಕುಮಾರಸ್ವಾಮಿ ಲೇಔಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದತ್ತಾತ್ರೇಯ ನಗರದಲ್ಲಿ ಸಿಎಂ ವೀಕ್ಷಣೆ ಮುಗಿಸಿ ಹೊರಡುವ ವೇಳೆ ಸ್ಥಳೀಯರ ಸಹನೆ ಕಟ್ಟೆ ಒಡೆದಿತ್ತು. ಈ ವೇಳೆ ಕೆಲ ಸ್ಥಳೀಯರು ಸ್ಥಳಕ್ಕೆ ಬಂದರೆ ಸಾಲದು, ಶಾಶ್ವತವಾಗಿ ಪರಿಹಾರ ಒದಗಿಸಬೇಕು ಎಂದು ಸಿಎಂಗೆ ಧಿಕ್ಕಾರ ಕೂಗಿದರು. ಮಧ್ಯಮವರ್ಗದ ಮನೆಗಳಿಗೆ ಭೇಟಿ ನೀಡದೆ ತೆರಳಿದ ಕೆರಳಿದ ಕೆಲ ಸ್ಥಳೀಯರು ಸಿಎಂ ಯಡಿಯೂರಪ್ಪ, ಸಚಿವ ಅಶೋಕ್ ವಿರುದ್ಧ ಘೋಷಣೆ ಕೂಗಿದರು.
'ಯಡಿಯೂರಪ್ಪ, ಅಶೋಕ್ ಡೌನ್ ಡೌನ್' ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಕಾರಿಗೆ ಅಡ್ಡ ಹಾಕಿದ ಸ್ಥಳೀಯರು ತಮ್ಮ ಸಿಟ್ಟನ್ನು ಪ್ರದರ್ಶಿಸಿದರು. ನಮಗೆ ಶಾಶ್ವತ ಪರಿಹಾರ ಕೊಡಿ ಯಾರಿಗೆ ಬೇಕು ನಿಮ್ಮ ಪರಿಹಾರದ ಹಣ. ಬರೀ ಭೇಟಿ ಕೊಟ್ಟರೆ ಸಾಲದು ನಮಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ವತಃ ಸಿಎಂ ಮತ್ತೆ ಕಾರಿನಿಂದ ಕೆಳಗಿಳಿದು ಬಂದು ಸ್ಥಳೀಯರ ಸಮಸ್ಯೆ ಆಲಿಸಿದರು. ಪುನಃ ದತ್ತಾತ್ರೇಯ ನಗರವನ್ನು ವೀಕ್ಷಣೆ ಮಾಡಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವಂತೆ ಸೂಚಿಸಿದರು. ಜೊತೆ ಪರಿಹಾರದ ಹಣವನ್ನು ಸಂಜೆಯೇ ಡೋರ್ ಟು ಡೋರ್ ತಲುಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.