ಬೆಂಗಳೂರು : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲಿದ್ರು ಅಂತಾ ಗೊತ್ತಿದೆಯಲ್ಲ.?. ಇವರು ಇದ್ದದ್ದು ಎಲ್ಲಿ?. ಏತಕ್ಕಾಗಿ ಅಲ್ಲಿದ್ದರು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಟೌನ್ ಹಾಲ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇದ್ರಲ್ವಾ ಯಾಕೆ ಇದ್ರು?. ಇವರು ಇದ್ದದ್ದು ಎಲ್ಲಿ?. ಏತಕ್ಕೋಸ್ಕರ ಇದ್ರು ಎಂದು ಪ್ರಶ್ನಿಸಿದರು.
ಕಾವೇರಿ ನಿವಾಸ ಬಿಟ್ಟು ಕೊಡದ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಳಿದ್ರೆ ಬಿಟ್ಟು ಕೊಡ್ತಿದ್ದೆ. ಆಗ ಯಡಿಯೂರಪ್ಪ ಇದ್ರಲ್ಲವಾ ಅದಕ್ಕೆ ಏನು ಹೇಳ್ತಾರೆ?. ಕೊನೆಯವರೆಗೂ ಯಡಿಯೂರಪ್ಪ ಅದೇ ಮನೆಯಲ್ಲಿ ಇದ್ರಲ್ಲವಾ?. ಒಂದು ವರ್ಷ 10 ತಿಂಗಳು ಯಡಿಯೂರಪ್ಪ ಅಲ್ಲೇ ಇದ್ರಲ್ಲಾ ಅದಕ್ಕೆ ಏನ್ ಹೇಳ್ತಾರೆ..?. ಜಾರ್ಜ್ಗೆ ಆ ಮನೆಯನ್ನು ನೀಡಲಾಗಿತ್ತು. ಜಾರ್ಜ್ ಬಳಿಕ ನನಗೆ ಕೊಟ್ಟಿದ್ದರು. ಕಾವೇರಿ ನಿವಾಸ ಅದು delegated ಕ್ವಾಟರ್ಸ್ ಅಲ್ಲ. ಕಾವೇರಿ ನಿವಾಸದಲ್ಲಿ ಯಾರು ಬೇಕಾದರೂ ಇರಬಹುದು ಎಂದು ಸಮರ್ಥಿಸಿಕೊಂಡರು.
ಆಸ್ಟ್ರೇಲಿಯಾ - ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ತೆರಳಿದ್ದಕ್ಕೆ ಕುಮಾರಸ್ವಾಮಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕ್ರಿಕೆಟ್ ಮ್ಯಾಚ್ ನೋಡೋಕೆ ಹೋಗಿದ್ದು, ಕ್ರೀಡೆಯನ್ನು ಬೆಂಬಲಿಸಲು ಹೋಗಿದ್ದು ಎಂದು ತಿಳಿಸಿದರು.
ಕಾವೇರಿ ನಿವಾಸದಲ್ಲೇ ಕೂತು ಸರ್ಕಾರ ಬೀಳಿಸಲು ಸ್ಕೆಚ್ ಹಾಕಿದ್ರು ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇವತ್ತಿನವರೆಗೂ ಡಿ.ಕೆ.ಶಿವಕುಮಾರ್ ಸರ್ಕಾರ ಬೀಳಿಸಿದ್ರು ಅಂದ್ರು. ಈಗ ನಾನು ಬೀಳಿಸಿದ್ದೇನೆ ಅಂತಿದ್ದಾರೆ. ಕುಣಿಯಲಾರದವರು ನೆಲ ಡೊಂಕು ಅಂತಾರೆ. ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಏನೇನೋ ಕುಮಾರಸ್ವಾಮಿ ಹೇಳ್ತಾರೆ ಎಂದು ಕುಟುಕಿದರು. 2.5 ವರ್ಷಗಳ ಬಳಿಕ ಸಂಪುಟ ಪುನಾರಚನೆಯ ಬಗ್ಗೆ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರತಿಕ್ರಿಯೆ ನೀಡದೇ ಸ್ಥಳದಿಂದ ಸಿಎಂ ತೆರಳಿದರು.
ದಸರಾ ಹಬ್ಬದ ಶುಭ ಹಾರೈಸಿದ ಸಿಎಂ : ಇದೇ ವೇಳೆ, ಸಿಎಂ ಸಿದ್ದರಾಮಯ್ಯ ರಾಜ್ಯದ ಜನರಿಗೆ ದಸರಾ ಮಹೋತ್ಸವದ ಶುಭ ಹಾರೈಸಿದ್ದಾರೆ. ನಾಳೆ ವಿಜಯದಶಮಿ, ಇವತ್ತು ಆಯುಧ ಪೂಜೆ. ಮೈಸೂರಿನಲ್ಲಿ ನಾಳೆ ಜಂಬೂ ಸವಾರಿ ನಡೆಯುತ್ತದೆ. ಜಂಬುಸವಾರಿಗೆ ಎಲ್ಲ ಸಿದ್ಧತೆಗಳು ಆಗಿದೆ. ಹೆಚ್.ಸಿ.ಮಹದೇವಪ್ಪ ಇದರ ಜವಾಬ್ದಾರಿ ತಗೊಂಡು ಕೆಲಸ ಮಾಡಿದ್ದಾರೆ. ನಾನು ಉದ್ಘಾಟನೆಗೆ ಹೋಗಿದ್ದೇನೆ. ನಾಳೆ ವಿಜಯದಶಮಿಯಲ್ಲಿ ಭಾಗವಹಿಸುತ್ತೇನೆ. ಚಾಮುಂಡೇಶ್ವರಿ ಮೆರವಣಿಗೆ ಆಗುತ್ತದೆ, ಅದಕ್ಕೆ ನಾವು ಪುಷ್ಪಾರ್ಚನೆ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ : ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ ಕಾರ್ಯಕ್ರಮಗಳು ಆರಂಭ