ಬೆಂಗಳೂರು : ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಟ ಮಾಡಿದರಂತೆ ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ. ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರಕ್ಕೆ ಸೇರಿದ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ. ಯಾಕೆ, ನಿಮ್ಮದೇ ಸರ್ಕಾರ ಕಳಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರೈತರ ಬಗ್ಗೆ ಕಾಳಜಿ ಇದ್ದರೆ ಬರ ಪರಿಹಾರಕ್ಕೆ ಒತ್ತಾಯಿಸಿ : ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರ ಸರ್ಕಾರದಿಂದ ಈವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನಿಮಗೆ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಒತ್ತಾಯಿಸಿ ಎಂದು ಆಗ್ರಹಿಸಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಅವರೇನು ಮಾಡುತ್ತಿದ್ದಾರೆ? ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರೆಂದಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರೇ ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರ ಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ಮನವಿ ಮಾಡಿದ್ದಾರೆ.
ನೆಲ - ಜಲ-ಭಾಷೆಯ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಾಲು ಸಾಲು ಅನ್ಯಾಯ ಮಾಡಿ ಯಾವ ಮುಖ ಹೊತ್ತು ರಾಜ್ಯ ಪ್ರವಾಸ ಹೊರಟಿದ್ದೀರಿ?. ಬರಪೀಡಿತ ಜನರಿಗೆ ಬೇಕಾಗಿರುವುದು ನಿಮ್ಮ ಬಾಯಿ ಮಾತಿನ ಸಾಂತ್ವನ ಅಲ್ಲ, ಅವರಿಗೆ ಬೇಕಾಗಿರುವುದು ಪರಿಹಾರ. ಬರಗಾಲದ ನಷ್ಟ - ನೋವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಹೇಳಿದ ಕೂಡಲೇ ಸರ್ಕಾರ ಬಿದ್ದುಹೋಗುವುದಿಲ್ಲ: ಬಿಜೆಪಿಯವರು ಹೇಳಿದ ಕೂಡಲೇ ಸರ್ಕಾರ ಬಿದ್ದುಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಧೃಢವಾಗಿದೆ. ಬಿಜೆಪಿಯವರು ಹೇಳಿದ ಕೂಡಲೇ ಸರ್ಕಾರ ಬಿದ್ದುಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಲ್ಲಭಬಾಯ್ ಪಟೇಲ್ ಅವರಿಗೆ ಗೌರವ ನಮನ : ಮಾಜಿ ಉಪ ಪ್ರಧಾನಿ ದಿವಂಗತ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ "ರಾಷ್ಟ್ರೀಯ ಏಕತಾ ದಿವಸ" ದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ವೇಳೆ, ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಳಗಾವಿ ನಗರಕ್ಕೆ ವಿಸ್ತರಿಸಿ: ರೈಲ್ವೇ ಸಚಿವರಿಗೆ ಸಿಎಂ ಪತ್ರ