ಬೆಂಗಳೂರು: ತನ್ನ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದಿಂದ ತೀವ್ರ ಅಸಮಾಧಾನಗೊಂಡು ಸಿಎಂಗೆ ಪತ್ರ ಬರೆದಿದ್ದ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನಕ್ಕೆ ಬುಧವಾರ ರಾತ್ರಿ ಪಾಟೀಲರನ್ನು ಕರೆಯಿಸಿಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿ ಸಮಸ್ಯೆ ಪರಿಹರಿಸಿದರು.
ಸಿಎಂ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಕರೆ ಮಾಡಿ ಬರುವುದಕ್ಕೆ ಹೇಳಿದ್ದರು. ನನ್ನ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಮತ್ತೆ ಯಾವುದೇ ಸಮಸ್ಯೆಯಾಗುವುದಿಲ್ಲ. ನನಗೆ ಸಮಾಧಾನ ಆಗಿದೆ. ಸಿದ್ದರಾಮಯ್ಯರ ಮೇಲೆ ನನಗೆ ನಂಬಿಕೆ ಇದೆ" ಎಂದು ಹೇಳಿದರು.
"ಸಚಿವ ಕೃಷ್ಣ ಬೈರೇಗೌಡ ನನಗೊಬ್ಬರಿಗಷ್ಟೇ ಅಲ್ಲ, ಎಲ್ಲರಿಗೂ ಸವಾಲು ಹಾಕಿದ್ದಾರೆ. ಅಧಿವೇಶನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಆದ್ದರಿಂದ ಅಧಿವೇಶನದಲ್ಲಿ ಭಾಗವಹಿಸುತ್ತೇನೆ. ಇಂದಿನ ಸಭೆ ತೃಪ್ತಿ ತಂದಿದೆ. ಸಚಿವ ಪ್ರಿಯಾಂಕ್ ಖರ್ಗೆ ಬೇರೆ ಸಭೆಯಲ್ಲಿ ಭಾಗಿಯಾಗಿದ್ದರು. ಹಾಗಾಗಿ, ಇಲ್ಲಿಗೆ ಬಂದಿಲ್ಲ. ಅನುದಾನ ವಿಚಾರವಾಗಿ ನನಗೆ ಅಸಮಾಧಾನ ಇಲ್ಲ. ಗ್ಯಾರಂಟಿ ಕೊಟ್ಟ ಕಾರಣ ಅನುದಾನ ಸಿಗುತ್ತಿಲ್ಲ. ಇದು ನನಗೆ ಗೊತ್ತಿದೆ. ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಸುಮ್ಮನಿದ್ದೆ. ಈಗ ಈ ವಿಚಾರ ಎತ್ತಿದ್ದೇನೆ. ಪ್ರಿಯಾಂಕ್ ಖರ್ಗೆ ಜೊತೆ ಯಾವುದೇ ಮನಸ್ತಾಪ ಇಲ್ಲ, ತಂದೆಗೆ ಕೊಡುವ ಗೌರವವನ್ನು ಪ್ರಿಯಾಂಕ್ ಖರ್ಗೆ ನನಗೆ ಕೊಡುತ್ತಾರೆ. ಕೃಷ್ಣ ಬೈರೇಗೌಡ ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: MLA B R Patil : ಆತ್ಮಗೌರವಕ್ಕೆ ಧಕ್ಕೆಯಾದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ: ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್
ಸಚಿವ ಸ್ಥಾನ ಸಿಕ್ಕಿಲ್ಲವೆಂದು ಬೇಸರ ಇದೆಯೇ? ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ.ಆರ್.ಪಾಟೀಲ್, "ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ" ಎಂದರು.
ಇದನ್ನೂ ಓದಿ: ಸಿಎಂಗೆ ಮತ್ತೊಂದು ಪತ್ರ ಬರೆದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ : ರಾಜೀನಾಮೆ ಎಚ್ಚರಿಕೆ
ಬಿ.ಆರ್.ಪಾಟೀಲ್ ಸಿಎಂಗೆ ಬರೆದ ಪತ್ರದಲ್ಲೇನಿತ್ತು?: ಸಚಿವ ಕೃಷ್ಣ ಬೈರೇಗೌಡ ತಮ್ಮ ವಿರುದ್ಧ ಅನುಮಾನ ಬರುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಸಿಎಂಗೆ ಪತ್ರ ಬರೆದಿದ್ದ ಪಾಟೀಲ್, ಕೆಆರ್‌ಐಡಿಎಲ್ ಕಾಮಗಾರಿಗಳನ್ನು ಲಂಚ ಪಡೆದು ನೀಡಿದ್ದೇನೆಂಬ ಆರೋಪ ಕೇಳಿ ಬಂದಿದೆ. ಇಂತಹ ಆರೋಪಗಳನ್ನು ಹೊತ್ತುಕೊಂಡು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ, ತನಿಖೆ ನಡೆಸಿ ಸತ್ಯಾಸತ್ಯತೆ ಹೊರತನ್ನಿ. ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಬಿ.ಆರ್. ಪಾಟೀಲ್ ಸಿಎಂಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಶಾಸಕ ಬಿ ಆರ್ ಪಾಟೀಲ್ ಅಸಮಾಧಾನದ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಚಿವ ಬೈರೇಗೌಡ