ಬೆಂಗಳೂರು : ಸರ್ಕಾರಿ ನಿವಾಸ ಕಾವೇರಿಗೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಶಿಫ್ಟ್ ಆಗಿದ್ದಾರೆ. ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಶಿಫ್ಟ್ ಆಗಿದ್ದಾರೆ.
ಅವರ ಅದೃಷ್ಟದ ನಿವಾಸ ಅಂತಲೇ ಜನಜನಿತವಾಗಿರುವ ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಶಿಫ್ಟ್ ಆಗಿದ್ದಾರೆ. ಶಿವಾನಂದ ವೃತ್ತದ ಬಳಿ ಇದ್ದ ಅವರ ಸರ್ಕಾರಿ ನಿವಾಸದಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಿದ್ದರಾಮಯ್ಯ ಶಿಫ್ಟ್ ಆಗಿದ್ದಾರೆ. ಸೋಮವಾರ ಬೆಳಗ್ಗೆಯೇ ಕಾವೇರಿ ನಿವಾಸದಲ್ಲಿ ಸಿಎಂ ಕುಟುಂಬದ ಸದಸ್ಯರು ಪೂಜೆ ಸಲ್ಲಿಕೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು.
ಕಳೆದ 2013ರಲ್ಲಿ ಸಿಎಂ ಆಗಿದ್ದ ಅವಧಿಯಲ್ಲಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಇದೇ ನಿವಾಸದಲ್ಲಿ ಉಳಿದುಕೊಂಡಿದ್ದರು. ಬಳಿಕ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದರು. ಅಂದು ಸಚಿವರಾಗಿದ್ದ ಕೆ. ಜೆ ಜಾರ್ಜ್ ಹೆಸರಿನಲ್ಲಿ ಹಂಚಿಕೆಯಾಗಿದ್ದ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ತಂಗಿದ್ದರು.
ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಅನಿವಾರ್ಯವಾಗಿ ವಾಸ್ತವ್ಯ ಬದಲಿಸಿದ್ದರು. ಬಳಿಕ ಪ್ರತಿಪಕ್ಷ ನಾಯಕನಾಗಿ ಕಾವೇರಿಯಿಂದ ಶಿವಾನಂದ ವೃತ್ತದ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಇದೀಗ ಸಿಎಂ ಆದ ಬಳಿಕ ಮತ್ತೆ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಈ ಹಿನ್ನೆಲೆ ಕಾವೇರಿ ನಿವಾಸಕ್ಕೆ ಪೊಲೀಸರಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ನೂತನ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಆಗಿರುವ ಸಿಎಂಗೆ ಸಚಿವರು, ನಾಯಕರಿಂದ ಅಭಿನಂದನೆ ಸಲ್ಲಿಸಿದರು. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿ ಸಚಿವರಾದ ಎಂ. ಸಿ ಸುಧಾಕರ್, ಸಚಿವ ಕೆ. ಜೆ ಜಾರ್ಜ್, ಮಾಜಿ ಸಚಿವೆ ಮೋಟಮ್ಮ ಅಭಿನಂದನೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆಯೇ ಕಾವೇರಿ ನಿವಾಸದಲ್ಲಿ ಸಿಎಂ ಕುಟುಂಬದ ಸದಸ್ಯರಿಂದ ಪೂಜೆ ಸಲ್ಲಿಕೆ ಮಾಡಲಾಗಿತ್ತು. ಕಳೆದೆರೆಡು ತಿಂಗಳಿಂದ ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ನಡೆದಿತ್ತು. ಇದೀಗ ನವೀಕರಣ ಪೂರ್ಣಗೊಂಡಿದ್ದು, ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಶಿವಾನಂದ ವೃತ್ತದ ಬಳಿಯ ಸರ್ಕಾರಿ ನಿವಾಸದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ವಾಸ್ತವ್ಯ ಹೂಡಲಿದ್ದಾರೆ. ಶಿವಾನಂದ ವೃತ್ತದ ಬಳಿಯ ಈ ಸರ್ಕಾರಿ ನಿವಾಸವೂ ಅದೃಷ್ಟದ ನಿವಾಸ ಎಂದೇ ಬಿಂಬಿತವಾಗಿದೆ.
ಇದನ್ನೂ ಓದಿ: ವಿದ್ಯೆ ಕಲಿಸುವುದಷ್ಟೇ ಶಿಕ್ಷಣದ ಉದ್ದೇಶ ಅಲ್ಲ, ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದು ಶಿಕ್ಷಣದ ಗುರಿ: ಸಿಎಂ