ಬೆಂಗಳೂರು: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ಬಿಡುವುದಕ್ಕೆ ರೈತರಿಂದ ವ್ಯಕ್ತವಾಗಿರುವ ವಿರೋಧ ವಿಚಾರವಾಗಿ ಅಲ್ಲಿನ ಸರ್ಕಾರದ ಜತೆ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ನೀರು ಬಿಡಲು ಮಹಾರಾಷ್ಟ್ರ ರೈತರ ವಿರೋಧ ವಿಚಾರ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ವಿಚಾರವಾಗಿ ಮಹಾರಾಷ್ಟ್ರದ ರೈತರ ಜೊತೆ ಮಾತನಾಡೋಕೆ ಆಗುತ್ತಾ? ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡುತ್ತೇನೆ ಎಂದರು.
ಇದೇ ವೇಳೆ, ಮಹದಾಯಿ ವಿಷಯದಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ಅಡ್ಡಿ ವಿಚಾರವಾಗಿ ಎಲ್ಲರನ್ನು ಕೂರಿಸಿ ಪ್ರಧಾನಿ ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ಸಲಹೆ ನೀಡಿದರು. ನೀವು 5 ವರ್ಷ ಇರ್ತೀರಾ ಅಥವಾ ಎರಡೂವರೆ ವರ್ಷ ಸಿಎಂ ಆಗಿ ಇರ್ತೀರಾ ಎಂಬ ಪ್ರಶ್ನೆಗೆ ಕೆರಳಿ ಕೆಂಡವಾದ ಸಿದ್ದರಾಮಯ್ಯ, ಗೊಂದಲ ನಮ್ಮ ಪಕ್ಷದಲ್ಲಿ ಇಲ್ಲ, ಮಾಧ್ಯಮದವರು ಸೃಷ್ಠಿ ಮಾಡ್ತಾ ಇರೋದು. ಮಹಾದೇವಪ್ಪ, ಎಂ.ಬಿ. ಪಾಟೀಲ್ ಹೇಳಿಕೆ ಕೊಟ್ರೆ ಹೋಗಿ ಅವರನ್ನು ಕೇಳಿ ನನ್ನನ್ನು ಯಾಕೆ ಕೇಳ್ತಾ ಇದ್ದೀರಾ? ಎಂದು ಸಿಟ್ಟಾದರು.
ಮಹಾರಾಷ್ಟ್ರ ರೈತರು ಕರ್ನಾಟಕಕ್ಕೆ ನೀರು ಬಿಡಲು ಅಡ್ಡಿ ವಿಚಾರ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಮಹಾರಾಷ್ಟ್ರ ಸಿಎಂ ಜೊತೆ ನಮ್ಮ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಮಹದಾಯಿಗೆ ಗೋವಾ, ಮಹಾರಾಷ್ಟ್ರ ಅಡ್ಡಿ ವಿಚಾರವಾಗಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಮೂರು ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮಾತನಾಡಬೇಕು. ರಾಜ್ಯಗಳ ನಡುವಿನ ನೀರಿನ ಸಮಸ್ಯೆ ಬಗೆಹರಿಸಿಬೇಕು ಎಂದು ಹೇಳಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನಾವೆಲ್ಲರೂ ಭಾರತ ದೇಶದಲ್ಲಿ ಇದ್ದೇವೆ. ನೀರು ಎಲ್ಲ ರಾಜ್ಯಗಳಿಗೂ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು. ಈ ಹಿಂದಿನ ಸಿಎಂ ಸಿದ್ಧರಾಮಯ್ಯ ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: Anna Bhagya scheme: ಅನ್ನಭಾಗ್ಯ ಯೋಜನೆಗೆ ಟೆಂಡರ್ ಮೂಲಕ ಅಕ್ಕಿ ಪಡೆಯಲು ಕ್ರಮ- ಸಿಎಂ ಸಿದ್ದರಾಮಯ್ಯ
ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ: ಕಳೆದ ತಿಂಗಳು ಸಿಎಂ ಸಿದ್ಧರಾಮಯ್ಯ ಬೇಸಿಗೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರಿನ ಅಗತ್ಯವಿದೆ. ಹಾಗಾಗಿ 5 ಟಿಎಂಸಿ ನೀರು ಬಿಡುಗಡೆ ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿರುವುದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಒಟ್ಟಾರೆ ಐದು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದರು.
ಇದನ್ನೂ ಓದಿ: ಮೋದಿ ಸರ್ಕಾರದ ಅಕ್ಕಿಯಲ್ಲಿ ಸಿದ್ದರಾಮಣ್ಣನ ಜಾತ್ರೆನಾ?: ಸಂಸದ ಪ್ರತಾಪ್ ಸಿಂಹ