ಬೆಂಗಳೂರು: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿ ಬಂಧಿಸಲಾಗಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ರಾಜಕೀಯ ನಾಯಕರು, ಧರ್ಮ ಗುರುಗಳಿಗೆ ಪತ್ರಗಳ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆರೋಪಿಯ ಜೊತೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳು ಶಾಮೀಲಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನ ಕೈಗಳಿಗೆ ಒಪ್ಪಿಸುವ ಮೂಲಕ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ.
ನಾಡಿನ ಪ್ರತಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಿದೆ. ಸಮಾಜಮುಖಿ ಧ್ವನಿ ಅಡಗಿಸಲು ಯತ್ನಿಸುವ ದುಷ್ಟ ಶಕ್ತಿಗಳೆಡೆಗೆ ನಮ್ಮದು 'ಜೀರೊ ಟಾಲರೆನ್ಸ್' ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾಹಿತಿಗಳಾದ ಕುಂ. ವೀರಭಧ್ರಪ್ಪ, ಬಿ ಟಿ ಲಲಿತಾ ನಾಯಕ್, ಕೆ ಮರುಳಸಿದ್ದಪ್ಪ, ಡಾ .ಜಿ ರಾಮಕೃಷ್ಣ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಕೆಲ ಸಾಹಿತಿಗಳಿಗೆ ಅನಾಮಧೇಯವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದವು. ಈ ಸಂಬಂಧ ಸಾಹಿತಿಗಳ ನಿಯೋಗ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಅದರಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಾಹಿತಿಗಳಿಗೆ ಬಂದಿದ್ದ ಬೆದರಿಕೆ ಪತ್ರಗಳ ಎಲ್ಲ ಬರವಣಿಗೆ ಶೈಲಿ ಒಂದೇ ಆಗಿತ್ತು. ಈ ಪತ್ರಗಳನ್ನು ದಾವಣಗೆರೆಯಿಂದ ಪೋಸ್ಟ್ ಮಾಡಲಾಗಿದ್ದ ಜಾಡು ಹಿಡಿದು ಹೊರಟ ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತನ ಸಹೋದರ ಹೇಳಿದ್ದೇನು?: ಈ ವಿಚಾರವಾಗಿ ಬಂಧಿತ ಶಿವಾಜಿ ರಾವ್ ಅವರ ಸಹೋದರ ಗುರುರಾಘವೇಂದ್ರ ಜಾಧವ್ ದಾವಣಗೆರೆಯಲ್ಲಿ ಮಾತನಾಡಿ, ಸಹೋದರನ ಬಂಧನದ ಬಗ್ಗೆ ಪೊಲೀಸರು ಮಾಹಿತಿ ನೀಡಿದಾಗ ಮಾತ್ರ ನಮಗೆ ಗೊತ್ತಾಗಿದೆ. ಆತನಿಗೆ ಹಿಂದುತ್ವದ ಬಗ್ಗೆ ಹೆಚ್ಚು ಒಲವು ಇತ್ತು. ಜೊತೆಗೆ ಶಿವಮೊಗ್ಗದಲ್ಲಿ ನಡೆಯುವ ಹಿಂದುತ್ವದ ಕಾರ್ಯಕ್ರಮಕ್ಕೂ ಹೋಗುತ್ತಿದ್ದ. ಆದರೆ, ಸಾಹಿತಿಗಳಿಗೆ ಜೀವ ಬೇದರಿಕೆ ಪತ್ರ ಬರೆದಿದ್ದಾರೆ ಅನ್ನೋದನ್ನು ಕೇಳಿ ನಮಗೆ ಶಾಕ್ ಆಗಿದೆ. ಶಿವಾಜಿ ರಾವ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಹೋದರೆ, ರಾತ್ರಿ ಹತ್ತು ಗಂಟೆಗೆ ಮನೆಗೆ ಬರುತ್ತಿದ್ದ, ಆತನಿಗೆ ಮದುವೆ ಆಗಿಲ್ಲ. ಹಿಂದುತ್ವ ಅಂತಾ ಸುತ್ತಾಡುತ್ತಿದ್ದ. ದಾವಣಗೆರೆ ನಗರದ EWS ಕಾಲೋನಿಯಲ್ಲಿ ವಾಸವಾಗಿದ್ದು, ಈ ತರ ಎಂಬುದು ಈಗ ಗೊತ್ತಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ