ಬೆಂಗಳೂರು: ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಾಗೂ 14 ಬಾರಿ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಇದೇ ಮೊದಲ ಬಾರಿ ವಿರೋಧ ಪಕ್ಷದ ಉಪಸ್ಥಿತಿಯಿಲ್ಲದೇ ಬಜೆಟ್ ಚರ್ಚೆಗೆ ಉತ್ತರ ನೀಡುವಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿಂದು ಬಿಜೆಪಿಯವರು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಟ್ಟು, ಹೊರಗೆ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದರು
ವಿರೋಧಪಕ್ಷದವರು ಚರ್ಚೆಗಳಲ್ಲಿ ಭಾಗವಹಿಸಲಿ ಎಂದು ಮೂರು ವಾರಗಳ ಕಾಲ ಅಧಿವೇಶನವನ್ನು ನಡೆಸಲಾಯಿತು. ಆದರೆ, ವಿಧಾನಸಭೆಗೆ ಆಗಮಿಸದೇ ಗದ್ದಲದಲ್ಲೇ ಸಮಯವನ್ನು ವ್ಯರ್ಥಗೊಳಿಸಿದರು. ಅವರು ನಡವಳಿಕೆ ಸರಿಯಿರದಿದ್ದ ಕಾರಣ, ಸಭಾಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ. ಸಭಾಧ್ಯಕ್ಷರ ಕ್ರಮಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಕೈಕಟ್ಟಿ ಹಾಕಿತ್ತು ಎಂಬುದು ಸುಳ್ಳು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೈಸ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ಸರ್ಕಾರದ ನಂತರ ಮೈತ್ರಿ ಸರ್ಕಾರ ಬಂದ ಸಂದರ್ಭದಲ್ಲಿಯೇ ಕ್ರಮ ತೆಗೆದುಕೊಳ್ಳಬಹುದಿತ್ತು. ತನಿಖೆ ನಡೆಸಲು ಕಾಂಗ್ರೆಸ್ ನವರು ಕೈಕಟ್ಟಿ ಹಾಕಿದ್ದರು ಎಂಬುದು ಸುಳ್ಳು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲಮನ್ನಾ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲವೇ, ಕಾಂಗ್ರಸ್ ಕೈಕಟ್ಟಿ ಹಾಕಿತ್ತು ಎಂದು ರಾಜೀನಾಮೆ ನೀಡಿದರೆ?. ತಮ್ಮ ಸ್ವಯಂ ತಪ್ಪಿನಿಂದಲೇ ಅವರು ಸರ್ಕಾರ ಕಳೆದುಕೊಳ್ಳುವಂತಾಯಿತು ಎಂದು ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಹಾಲಿನ ದರ ಏರಿಕೆ ವಿಚಾರದಲ್ಲಿ ಆತುರದ ನಿರ್ಧಾರ ಇಲ್ಲ. ದರ ಏರಿಕೆಗೆ ಒಕ್ಕೂಟದಿಂದ ಬೇಡಿಕೆ ಬಂದಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡ್ತೇವೆ. ಏರಿಕೆ ಸಂಬಂಧ ಚರ್ಚೆ ಮಾಡಿಯೇ ತಿರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಮ್ಮ ಸರ್ಕಾರಕ್ಕೆ ಜನಪ್ರಿಯತೆ ಇದೆ ಎಂದಷ್ಟೇ ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಿದೇ ತೆರಳಿದರು.
ಇದನ್ನೂ ಓದಿ: ನೈಸ್ ರಸ್ತೆ ಅಕ್ರಮದ ವಿರುದ್ಧ ಜೆಡಿಎಸ್ - ಬಿಜೆಪಿ ಒಟ್ಟಾಗಿ ಹೋರಾಡಲಿದೆ; ಕುಮಾರಸ್ವಾಮಿ ಘೋಷಣೆ
ಕಾಂಗ್ರೆಸ್ಸಿಗರು ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ -ಹೆಚ್ಡಿಕೆ: ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಲಿನ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಆಲ್ಕೋಹಾಲಿನ ಬೆಲೆ ಏರಿಸಿದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ರೂ. 3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ. ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.