ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಯ ಕುರಿತಂತೆ ಯಾವ ಗೊಂದಲವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ತಮ್ಮ ಸ್ವಕ್ಷೇತ್ರ ಮೈಸೂರಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಾವು ನುಡಿದಂತೆ ನಡೆಯುವವರು ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭರವಸೆಗಳನ್ನು ನೀಡಿದ್ದರು. ಅವುಗಳಲ್ಲಿ ಎಷ್ಟು ಈಡೇರಿವೆ ಎಂಬ ಬಗ್ಗೆ ಎಷ್ಟು ಚರ್ಚೆಯಾಗಿದೆ ಎಂದು ಪ್ರಶ್ನಿಸಿದರು.
ಇಂದು ಮೈಸೂರಿಗೆ ತೆರಳಿ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಐದು ಖಾತರಿ ಯೋಜನೆಗಳಲ್ಲಿ ಮೂರನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಅದರಂತೆ ಜೂನ್ 11 ರಂದು ಬೆಂಗಳೂರಿನಲ್ಲಿ ಶಕ್ತಿ ಯೋಜನೆ, ಆಗಸ್ಟ್ 1 ರಂದು ಕಲಬುರಗಿಯಲ್ಲಿ ಗೃಹ ಜ್ಯೋತಿ ಮತ್ತು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಖಾತ್ರಿಗಳಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಸೂಚನೆ ನೀಡಿದರು.
ಅರ್ಜಿಗಳನ್ನು ಸಲ್ಲಿಸುವಾಗ ಫಲಾನುಭವಿಗಳಿಗೆ ಯಾವುದೇ ಕಿರುಕುಳ ಉಂಟಾಗದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲು ಕಾರಣಗಳನ್ನು ನೀಡಬೇಕು. ಅಸಂಬದ್ಧ ಕಾರಣಗಳಿಗಾಗಿ ಅರ್ಜಿಗಳನ್ನು ತಿರಸ್ಕರಿಸಿದರೆ, ಉದ್ಯೋಗಿಗಳ ವಿರುದ್ಧ ಕ್ರಮ ಎಂದು ಎಚ್ಚರಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲಾಗುವುದರಿಂದ ಯಾವುದೇ ದೋಷ ಕಂಡುಬರದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಆದರೆ ಈ ಮಧ್ಯೆ ಯೋಜನೆ ಜಾರಿ ವಿಚಾರದಲ್ಲಿ ಕೆಲ ಗೊಂದಲವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 15ರಂದು ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ಜಮೆ ಮಾಡಲು ನಿರ್ಧಾರ ಮಾಡಲಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವುದು ಕಡ್ಡಾಯ. ಆದರೆ ಮನೆಯ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಾಗೂ ಯಜಮಾನಿ ಅಥವಾ ಪತಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಅರ್ಹರಲ್ಲ ಎಂದು ಹೇಳಲಾಗಿದೆ. ಇದನ್ನು ಮೊದಲೇ ತಿಳಿಸದಿರುವುದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮತ್ತೊಂದು ಗೊಂದಲ ಮಕ್ಕಳು ತೆರಿಗೆ ಪಾವತಿಸಿದರೆ ಆ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆ ಇಲ್ಲ. ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿಸಿದರೆ ಯೋಜನೆ ಅನ್ವಯಿಸಲ್ಲ ಎಂದು ಹೇಳುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೊಂದಲ ಸೃಷ್ಟಿಮಾಡಿದ್ದರು. ಆದರೆ ಅವರೂ ಸೇರಿದಂತೆ ಸಂಪುಟದ ಹಲವು ಸದಸ್ಯರು ಇದಕ್ಕೆ ನಂತರ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಇನ್ನೂ ಗೊಂದಲ ಬಗೆಹರಿದಿಲ್ಲ. ಗೃಹಜ್ಯೋತಿ ವಿಚಾರದಲ್ಲಿ ಒಬ್ಬ ಮನೆ ಮಾಲೀಕನ ಹೆಸರಿನಲ್ಲಿ ಎಷ್ಟೇ ವಿದ್ಯುತ್ ಸಂಪರ್ಕ ಇರಲಿ ಅದರಲ್ಲಿ ಒಂದಕ್ಕೆ ಮಾತ್ರ ಉಚಿತ ಯೋಜನೆ ಅನ್ವಯಿಸಲಿದೆ ಎಂದು ಆದೇಶದಲ್ಲಿದೆ.
ಆದರೆ ಎಲ್ಲಾ ಸಂಪರ್ಕಗಳಿಗೂ ಉಚಿತ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಿಎಂ ಸಿದ್ದರಾಮಯ್ಯ, ಇಂದನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ತಿದ್ದುಪಡಿ ಆದೇಶ ಹೊರಬಿದ್ದಿಲ್ಲ. ಜನರ ಗೊಂದಲ ಮುಂದುವರಿದಿದೆ. ಆದರೆ ಇಂದು ಸಿಎಂ ಸ್ಪಷ್ಟಪಡಿಸಿರುವ ಹಿನ್ನೆಲೆ ಆದೇಶ ಜಾರಿಯ ವೇಳೆಗೆ ಇರುವ ಎಲ್ಲಾ ಗೊಂದಲ ಪರಿಹಾರವಾಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ.