ಬೆಂಗಳೂರು: ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಿದ್ದು, ಅವರ ನೇತೃತ್ವದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಮೊದಲನೇ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸುರ್ಜೇವಾಲ ರಾಜ್ಯಕ್ಕೆ ಭೇಟಿ ನೀಡಿರುವ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಇವತ್ತು ಸುರ್ಜೇವಾಲ ಬಂದಿದ್ದಾರೆ. ನಿಗಮ ಮಂಡಳಿ ಇವತ್ತೇ ಫೈನಲ್ ಆಗುತ್ತಾ, ಏನು ಆಗುತ್ತೋ ಗೊತ್ತಿಲ್ಲ. ಮೊದಲ ಹಂತದಲ್ಲಿ ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ವಿಚಾರ ಇದೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಶಾಸಕರಿಗೆ ಮಾಡಬೇಕು ಎಂಬುದು ಇದೆ ಎಂದರು.
ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರ ಅನುದಾನದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯವರಿಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಮಾತು ನಂಬಿಕೊಂಡು ನೀವು ಪ್ರಶ್ನೆ ಕೇಳಿದ್ರೆ ಹೇಗೆ. ಬರಪರಿಹಾರದ ಕಾಮಗಾರಿಗಳಿಗೆ ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಸುಮಾರು 800 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನು ಕುಡಿಯುವ ನೀರು, ಮೇವು ಸೇರಿದಂತೆ ಇತರ ಬರಪರಿಹಾರ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಬರಪರಿಹಾರ ಕೋರಿ ಮನವಿ ಸಲ್ಲಿಸಿದ್ದರೂ, ಅಲ್ಲಿಂದ ಯಾವುದೇ ರೀತಿಯ ಪರಿಹಾರ ಇನ್ನೂ ತಲುಪಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಜಮೀರ್ ಅಹಮದ್ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಕೆ ಎಸ್ ಈಶ್ವರಪ್ಪ ಒತ್ತಾಯ
ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದ ಶಾಸಕ: ಮತ್ತೊಂದೆಡೆ, ಬೆಳಗಾವಿಯ ಸವದತ್ತಿ ಶಾಸಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದಾರೆ. ಯರಗಟ್ಟಿ ಪಟ್ಟಣದಲ್ಲಿ ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಸವದತ್ತಿ ಶಾಸಕ ವಿಶ್ವಾಸ ವೈದ್ಯ, "ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ. ಮುಂದೊಂದು ದಿನ ಬೆಳಗಾವಿ ಜಿಲ್ಲೆಯಿಂದ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನಿಶ್ಚಿತ" ಎಂದು ಹೇಳಿದ್ದಾರೆ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ವಿಚಾರ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಬೆನ್ನಲ್ಲೆ ಈ ಬಗ್ಗೆ ಯಾರೂ ಮಾತನಾಡದಂತೆ ಹೈಕಮಾಂಡ್ ಎಚ್ಚರಿಕೆ ನೀಡಿತ್ತು. ಆ ಬಳಿಕ ತಣ್ಣಾಗಿದ್ದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ಎಚ್ಚರಿಕೆಯ ನಡುವೆಯೂ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳುವ ಮೂಲಕ ಶಾಸಕ ವಿಶ್ವಾಸ ವೈದ್ಯ ಸಿಎಂ ಬದಲಾವಣೆ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.