ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಹುತೇಕ ಪೂರ್ಣಗೊಂಡಿದೆ. ಉಳಿದಿರುವ ಎಲ್ಲ 24 ಸಚಿವ ಸ್ಥಾನಗಳನ್ನು ಏಕಕಾಲಕ್ಕೆ ಭರ್ತಿ ಮಾಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಗುರುವಾರ ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ತೆರೆ ಬಿದ್ದಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿಕುಮಾರ್ ಜೊತೆ 8 ಸಚಿವರು ಪ್ರಮಾಣವಚನ ಸ್ವೀಕರಿಸುವ ಮೂಲಕ ಕಳೆದ ವಾರ 10 ಸ್ಥಾನ ಭರ್ತಿಯಾಗಿತ್ತು. ಇದೀಗ ಬಾಕಿ ಉಳಿದ 24 ಸಚಿವ ಸ್ಥಾನಗಳ ಪೈಕಿ 20 ಸ್ಥಾನ ಭರ್ತಿ ಮಾಡಿಕೊಂಡು ಉಳಿದ ನಾಲ್ಕನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಈಗ ಎರಡನೇ ಹಂತದಲ್ಲಿಯೇ ಎಲ್ಲ ಸಚಿವರ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆ (ಶನಿವಾರ) ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಕೆಯಾಗಿದ್ದು ಪ್ರವಾಸದಲ್ಲಿರುವ ರಾಜ್ಯಪಾಲರು ಇಂದು ರಾತ್ರಿಯೇ ನಗರಕ್ಕೆ ಹಿಂತಿರುಗಲಿದ್ದಾರೆ.
ಸಚಿವರ ಪಟ್ಟಿ ಅಂತಿಮ: 135 ಶಾಸಕರ ಪೈಕಿ ಮೂರಕ್ಕೂ ಹೆಚ್ಚು ಸಾರಿ ಗೆದ್ದ ಶಾಸಕರೇ ನೂರಕ್ಕೂ ಹೆಚ್ಚು ಮಂದಿ ಇದ್ದರು. ಇದರಿಂದಾಗಿ ಸಿಎಂ ಹಾಗೂ ಡಿಸಿಎಂ ಮೇಲೆ ಸಹಜವಾಗಿ ಸಚಿವ ಸ್ಥಾನಕ್ಕೆ ಒತ್ತಡ ಹೆಚ್ಚಾಗಿತ್ತು. ಈ ಸಮಸ್ಯೆಯನ್ನು ಇಲ್ಲಿ ಪರಿಹರಿಸಿಕೊಳ್ಳುವುದಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್ ನಾಯಕರ ಬಳಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ತೆರಳಿದ್ದರು.
ಗುರುವಾರ ಬಹುತೇಕ ಪಟ್ಟಿ ಅಂತಿಮಗೊಂಡ ಹಿನ್ನೆಲೆಯಲ್ಲಿ ಡಿಕೆಶಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ತಡ ರಾತ್ರಿಯೇ ಬೆಂಗಳೂರಿಗೆ ಮರಳಿದ್ದಾರೆ. ಆದರೆ, ಹೈಕಮಾಂಡ್ ನಾಯಕರ ತುರ್ತು ಬುಲಾವ್ ಕಾರಣ ಇಂದು ಬೆಳಗ್ಗೆ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 1 ಗಂಟೆ ಸಮಯಕ್ಕೆ ಡಿಕೆಶಿ ದೆಹಲಿ ತಲುಪಲಿದ್ದು ಸಿಎಂ ಸಿದ್ದರಾಮಯ್ಯ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ತೆರಳಲಿದ್ದಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಮಾಲೋಜಿಸಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಆಗಿ ನಿಯೋಜಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಸಂಭವನೀಯ ಸಚಿವರು ಇವರು..: ರಾಜ್ಯ ಸಚಿವ ಸಂಪುಟ ಸೇರಲಿರುವ ಸಂಭವನೀಯ ಸಚಿವರ ವಿವರ ಲಭ್ಯವಾಗಿದೆ. ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ಗೌಡ ದರ್ಶನಾಪುರ, ಡಾ.ಹೆಚ್.ಸಿ.ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್.ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್, ಪುಟ್ಟರಂಗ ಶೆಟ್ಟಿ, ಚಿಂತಾಮಣಿ ಸುಧಾಕರ್, ಹೆಚ್.ಕೆ. ಪಾಟೀಲ್, ಚೆಲುವರಾಯಸ್ವಾಮಿ, ಮಧುಗಿರಿ ಕೆ.ಎನ್. ರಾಜಣ್ಣ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ, ರುದ್ರಪ್ಪ ಲಮಾಣಿ, ಶರಣಪ್ರಕಾಶ್ ಪಾಟೀಲ್, ಎನ್.ಎಸ್. ಭೋಸರಾಜು, ಎನ್. ನಾಗೇಂದ್ರ ಹೆಸರು ಸಚಿವ ಸ್ಥಾನಕ್ಕೆ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.
ಸಚಿವ ಸ್ಥಾನ ಕೈತಪ್ಪಿದವರು: ಸಂಪುಟ ವಿಸ್ತರಣೆಯಲ್ಲಿ ಹಿರಿಯ ಶಾಸಕರಾದ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ, ಎನ್.ಎ. ಹ್ಯಾರಿಸ್, ಲಕ್ಷ್ಮಣ್ ಸವದಿ, ಎಂ. ಕೃಷ್ಣಪ್ಪ, ನರೇಂದ್ರಸ್ವಾಮಿ, ತನ್ವೀರ್ ಸೇಠ್, ಎನ್.ವೈ.ಗೋಪಾಲಕೃಷ್ಣ, ಹೆಚ್.ಡಿ. ರಂಗನಾಥ್, ಎಸ್.ಆರ್. ಶ್ರೀನಿವಾಸ್, ಬಿ.ಕೆ.ಸಂಗಮೇಶ್, ಟಿ.ಬಿ. ಜಯಚಂದ್ರ, ಹೆಚ್.ಸಿ.ಬಾಲಕೃಷ್ಣ, ಎಂ.ವೈ.ಪಾಟೀಲ್, ಅಜಯ್ ಸಿಂಗ್, ಖನಿಜ್ ಫಾತಿಮಾ, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಅಶೋಕ್ ಪಟ್ಟಣ, ಹೆಚ್.ವೈ. ಮೇಟಿ, ವಿನಯ್ ಕುಲಕರ್ಣಿ, ಯು.ಬಿ. ಬಣಕಾರ್, ಶ್ರೀನಿವಾಸ್ ಮಾನೆ, ಸಂತೋಷ್ ಲಾಡ್ ಮತ್ತಿತರರಿಗೆ ತೀವ್ರ ನಿರಾಸೆ ಉಂಟಾಗಿದೆ.
ಇದನ್ನೂ ಓದಿ: ವಿಧಾನಸಭೆ ಸೋಲಿನ ಶಾಕ್ನಿಂದ ಇನ್ನೂ ಹೊರಬಾರದ ಬಿಜೆಪಿ: ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ನೇಮಕ ವಿಳಂಬ