ಬೆಂಗಳೂರು: ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ನೂತನ ಸಚಿವರನ್ನು ಪರಿಚಯ ಮಾಡಿಕೊಡಬೇಕು ಎಂದು ಹಂಗಾಮಿ ಸ್ಪೀಕರ್ ಆರ್. ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಹೊಸ ಸರ್ಕಾರ ರಚನೆಯಾಗಿದೆ. ರಾಜ್ಯಪಾಲರು ನನಗೆ, ಉಪ ಮುಖ್ಯಮಂತ್ರಿ ಹಾಗೂ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ ದಿನದಿಂದಲೇ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದರು.
ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಇದ್ದುದ್ದರಿಂದ ಹೊಸ ಸಚಿವರ ಪರಿಚಯ ಸದನಕ್ಕೆ ಮಾಡಿಕೊಟ್ಟಿರಲಿಲ್ಲ ಎಂದು ಹೇಳುತ್ತಾ, ಸಚಿವರನ್ನು ಪರಿಚಯಿಸಲು ಸಭಾಧ್ಯಕ್ಷರ ಅನುಮತಿ ಕೋರಿದರು. ಸಭಾಧ್ಯಕ್ಷರ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ತಡವಾಗಿ ಸದನಕ್ಕೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರನ್ನೂ ಸದನಕ್ಕೆ ಪರಿಚಯ ಮಾಡಿಕೊಟ್ಟರು. ಪ್ರತಿ ಸಚಿವರನ್ನು ಪರಿಚಯಿಸಿದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಮಧ್ಯೆ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೂತನ ಮುಖ್ಯಮಂತ್ರಿ ಮತ್ತು ಸಚಿವರಿಗೆ ಅಭಿನಂದನೆಗಳು. ನೂತನ ಸಚಿವರಿಗೆ ಇದುವರೆಗೆ ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿಕೆ ಮಾಡಿ ಪರಿಚಯಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಲೇವಡಿ ಮಾಡಿದರು. ಕೂಡಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಆದಷ್ಟು ಬೇಗ ಸಚಿವರಿಗೆ ಜವಾಬ್ದಾರಿ ಕೊಡುತ್ತೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಳಿಕ ಎಷ್ಟು ದಿನ ಒಬ್ಬರೇ ಕೆಲಸ ಮಾಡಿದ್ದರು ಎಂದು ತಿರುಗೇಟು ನೀಡಿದರಲ್ಲದೆ, ಸಚಿವರಿಗೆ ಖಾತೆ ಹಂಚಿಕೆ ಮಾಡುವ ವಿಚಾರದಲ್ಲಿ ನಿಮಗೆ ಸಂಶಯ ಬೇಡ. ನಿಮ್ಮ ಸಲಹೆಗೆ ಅಭಿನಂದನೆಗಳು ಎಂದರು.
ಈ ವೇಳೆ ಬಸವರಾಜ ಬೊಮ್ಮಾಯಿ ಮಾತನಾಡಿ, ನಿಮ್ಮ ಒಳ್ಳೆಯದಕ್ಕೆ ನಾನು ಹೇಳಿದ್ದು, ಜನರು ಏನೆಂದು ತಿಳಿದಿದ್ದಾರೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತಂದಿರುವುದಾಗಿ ಹೇಳಿದರು.
ಇದನ್ನೂ ಓದಿ:ವಿರೋಧ ಪಕ್ಷ ಬಲಿಷ್ಠವಿದ್ದಷ್ಟು ಬಲಿಷ್ಠವಾಗಿರುತ್ತೇವೆ, ದುರ್ಬಲರಾದರೆ, ನಾವೂ ದುರ್ಬಲರಾಗುತ್ತೇವೆ : ಡಿ ಕೆ ಶಿವಕುಮಾರ್
ದೆಹಲಿಯತ್ತ ಪ್ರಯಾಣ ಬೆಳೆಸಿದ ಸಿಎಂ, ಡಿಸಿಎಂ: ಇನ್ನು ಸಚಿವ ಸಂಪುಟ ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಕಾಂಗ್ರೆಸ್ ನ ಹಲವಾರು ಸಚಿವಾಕಾಂಕ್ಷಿಗಳು ಸಹ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 2.55ರ ಸಮಯಕ್ಕೆ ವಿಮಾನದಲ್ಲಿ ದೆಹಲಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಯಾಣ ಬೆಳೆಸಿದರು. ಡಿಸಿಎಂ ಜೊತೆ ಅವರ ಸಹೋದರ ಡಿ ಕೆ ಸುರೇಶ್ ಕೂಡ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಸಂಪುಟ ಸೇರಬಯಸುವ ಸಂಖ್ಯೆ ಬಹುದೊಡ್ಡದಿದ್ದು, ಇಬ್ಬರು ನಾಯಕರು ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸುವ ಕುರಿತಾಗಿ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.