ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ನಗರ ರಸ್ತೆ ಸುರಕ್ಷತಾ ಸಮಿತಿ ಹಾಗೂ ಸಂಚಾರಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪುಸ್ತಕ ಹಾಗೂ ಪೋಸ್ಟರ್ಗಳನ್ನ ಬಿಡುಗಡೆಗೊಳಿಸಲಾಯಿತು.
![ಸಂಚಾರಿ ಪೊಲೀಸ್ ಸಿಬ್ಬಂದಿಯೊಂದಿಗೆ ಸಿಎಂ ಮತ್ತು ಡಿಸಿಎಂ](https://etvbharatimages.akamaized.net/etvbharat/prod-images/13-01-2024/kn-bng-04-road-safety-week-7211560_13012024123758_1301f_1705129678_766.jpg)
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ''ಚಿಕ್ಕ ವಯಸ್ಸಿನಿಂದಲೇ ಕಾನೂನು ಪಾಲನೆಯ ಕುರಿತು ಅರಿತುಕೊಳ್ಳಬೇಕು ಎಂಬ ಕಾರಣದಿಂದ ನಿಮ್ಮೆಲ್ಲರನ್ನು ಕರೆಸಿ ಈ ರಾಷ್ಟ್ರೀಯ ಸುರಕ್ಷತಾ ಸಪ್ತಾಹವವನ್ನು ಆಯೋಜಿಸಲಾಗಿದೆ. ನಮ್ಮ ಕಾಲಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನ ಇಂದು ನಿಮ್ಮ ಮುಂದಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನ ರಸ್ತೆ ಸುರಕ್ಷತೆ, ಸಂಚಾರ ವ್ಯವಸ್ಥೆಯಲ್ಲಿ ಹೇಗೆ ಬಳಸಬಹುದು ಎಂಬ ವಿಡಿಯೋ ತುಣುಕನ್ನ ಇಂದು ನಾನು, ಮಾನ್ಯ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಾರಿಗೆ ಸಚಿವರು ಗಮನಿಸಿದ್ದೇವೆ'' ಎಂದರು.
![ಸಂಚಾರಿ ಇಲಾಖೆಯ ಉಪಕ್ರಮಗಳಿಗೆ ಚಾಲನೆ](https://etvbharatimages.akamaized.net/etvbharat/prod-images/13-01-2024/kn-bng-04-road-safety-week-7211560_13012024123758_1301f_1705129678_136.jpg)
''ಅಲ್ಲದೇ ರಸ್ತೆ ಸಂಚಾರಿ ನಿಯಮಗಳನ್ನ ನಾವು ಪಾಲಿಸದಿದ್ದರೆ ಎಷ್ಟು ಅವಘಡಗಳಾಗಬಹುದು ಎಂಬುದಕ್ಕೆ ಸಾಕಷ್ಟು ದಾಖಲೆಗಳು ನಮ್ಮ ಮುಂದಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಪ್ರಕಾರ 2023ರಲ್ಲಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಯುವಕರೇ ಆಗಿದ್ದಾರೆ. ಆದ್ದರಿಂದ ಜೀವವನ್ನ ಕಳೆದುಕೊಳ್ಳುವ ಮುನ್ನ ಕಾಪಾಡಿಕೊಳ್ಳಬೇಕು'' ಎಂದು ಅವರು ತಿಳಿಸಿದರು.
![ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/13-01-2024/kn-bng-04-road-safety-week-7211560_13012024123758_1301f_1705129678_237.jpg)
ಗೃಹ ಸಚಿವ ಡಾ.ಜಿ. ಪರಮೇಶ್ವರ ಮಾತನಾಡಿ ''ಜನರು ಸುರಕ್ಷತೆಯಿಂದ ಇರಬೇಕು, ಹೆಚ್ಚೆಚ್ಚು ಅಪಘಾತಗಳು ಆಗಬಾರದು ಎಂಬುದು ರಸ್ತೆ ಸುರಕ್ಷತಾ ಮಾಸಾಚರಣೆಯ ಉದ್ದೇಶ. ಈ ಮೂಲಕ ಇಡೀ ರಾಜ್ಯದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ, ಹೆಚ್ಚಾಗಿ ದ್ವಿಚಕ್ರ ವಾಹನಗಳು ಸಂಚಾರ ಮಾಡುತ್ತಿವೆ. 900 ಜನ ಈ ವರ್ಷ ರಸ್ತೆ ಅಪಘಾತದಿಂದ ನಿಧನರಾಗಿದ್ದಾರೆ. ಒಂದೊಂದು ಬಾರಿ ಅಪಘಾತದಲ್ಲಿ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿರುವುದನ್ನು ನೋಡಿದ್ದೇವೆ. ರಸ್ತೆ ಸುರಕ್ಷತಾ ಪಾಲನೆಗೆ ಸಾಕಷ್ಟು ಕ್ರಮಗಳು ಇವೆ. ಇದಕ್ಕಾಗಿ ಕಮಾಂಡ್ ಸೆಂಟರ್ ಕೂಡ ನಿರ್ಮಾಣ ಮಾಡಿದ್ದೇವೆ. ಪೊಲೀಸರು ನಿತ್ಯ 24 ಗಂಟೆ ಎಲ್ಲವನ್ನೂ ಗಮನಿಸುತ್ತಾ ಕೆಲಸ ಮಾಡುತ್ತಿರುತ್ತಾರೆ. ಸಂಚಾರ ಸುರಕ್ಷತಾ ನಿಯಮಗಳ ಕುರಿತು ಎಲ್ಲರಿಗೂ ಅರಿವಿರಬೇಕು'' ಎಂದರು.
![ಸಿಎಂ ಹಾಗೂ ಡಿಸಿಎಂ](https://etvbharatimages.akamaized.net/etvbharat/prod-images/13-01-2024/kn-bng-04-road-safety-week-7211560_13012024123758_1301f_1705129678_98.jpg)
ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿವಿಧ ಸಂಚಾರಿ ಇಲಾಖೆಯ ಅನೇಕ ಉಪಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
![ಪೋಸ್ಟರ್ಗಳನ್ನ ಗಮನಿಸುತ್ತಿರುವುದು](https://etvbharatimages.akamaized.net/etvbharat/prod-images/13-01-2024/kn-bng-04-road-safety-week-7211560_13012024123758_1301f_1705129678_200.jpg)
ಇದನ್ನೂ ಓದಿ: ಹೈಕೋರ್ಟ್ ಆದೇಶದಂತೆ ಬೆಂಗಳೂರಿನ ಫುಟ್ಪಾತ್ ಮೇಲಿನ ಅಂಗಡಿಗಳ ತೆರವು: ಡಿಸಿಎಂ ಶಿವಕುಮಾರ್