ಬೆಂಗಳೂರು: ನವೀನ್ ಎಂಬ ಉಪನ್ಯಾಸಕರೊಬ್ಬರು ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ಐದು ವರ್ಷದ ಮಗುವನ್ನು ಜನತಾ ದರ್ಶನಕ್ಕೆ ಕರೆತಂದು ಕನಕಪುರಕ್ಕೆ ವರ್ಗಾವಣೆ ಮಾಡುವಂತೆ ಸಿಎಂ ಬಳಿ ಮನವಿ ಮಾಡಿದರು. ತಮ್ಮ ಐದು ವರ್ಷದ ಮಗು ಕಿಡ್ನಿ ಸಿಂಡ್ರೋಮ್ ನಿಂದ ಬಳಲುತ್ತಿದೆ. ಆದರೆ ನಮ್ಮನ್ನು ಅರಸೀಕೆರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಕನಕಪುರಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದರು.
ಸದ್ಯ ಕನಕಪುರದಲ್ಲಿ ಹುದ್ದೆ ಖಾಲಿ ಇದ್ದು, ವೈದ್ಯಕೀಯ ಪ್ರಕರಣಗಳಲ್ಲಿ ತಮ್ಮ ಹುಟ್ಟೂರಿಗೆ ವರ್ಗಾವಣೆ ತೆಗೆದುಕೊಳ್ಳುವ ನಿಯಮ ಇದೆ. ಅದರಂತೆ ಕನಕಪುರಕ್ಕೆ ವರ್ಗಾವಣೆ ಮಾಡಿಕೊಡುವಂತೆ ಕೋರಿದರು. ಬಹಳಷ್ಟು ಸಮಸ್ಯೆ ಇದೆ. ಕನಕಪುರಕ್ಕೆ ವರ್ಗಾಯಿಸಿದರೆ ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬಹುದು ಎಂದು ಮನವಿ ಮಾಡಿದರು. ಈ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಹವಾಲು ಸ್ವೀಕರಿಸುತ್ತಲೇ ಸಿಎಂ ಊಟ: ಮಧ್ಯಾಹ್ನದ ಊಟದ ಬಿಡುವಿನಲ್ಲಿ ಊಟಕ್ಕೆ ಎಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿಗಳು, ಬಳಿಕ ಅಹವಾಲು ಸಲ್ಲಿಸಲು ಬಂದಿರುವವರ ಸಂಖ್ಯೆ ಇನ್ನೂ ಸಿಕ್ಕಾಪಟ್ಟೆ ಇದೆ ಎಂದು ತಿಳಿದು, ಅಹವಾಲು ಸ್ವೀಕರಿಸುವ ಟೇಬಲ್ಗೇ ಊಟ ತರಿಸಿಕೊಂಡು ಅಲ್ಲೇ ಕುಳಿತು ಊಟ ಮಾಡಿದರು.
ವಿವಾಹಿತ ಮಹಿಳೆಯರ ಜಾತಿ ಮೀಸಲಾತಿ ರದ್ದು: 2022ರ ಶಿಕ್ಷಕರ ನೇಮಕಾತಿಯಲ್ಲಿ ಸುಮಾರು 1800 ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಈ ವಿವಾಹಿತ ಮಹಿಳೆಯರ ಜಾತಿ ಮೀಸಲಾತಿ ರದ್ದುಗೊಳಿಸಿ ಸಾಮಾನ್ಯ ವರ್ಗಕ್ಕೆ ಸೇರಿಸಿರುತ್ತಾರೆ. ತಾವು ನೇಮಕಾತಿ ಅಧಿಸೂಚನೆ ಅನ್ವಯ ಮಾಹಿತಿ ಭರ್ತಿ ಮಾಡಿದ್ದು, ಅದರಲ್ಲಿ ಕೇವಲ ಆರ್.ಡಿ. ಸಂಖ್ಯೆ ಮಾತ್ರ ನಮೂದಿಸಲು ಅವಕಾಶವಿದೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ತಮ್ಮ ಮೀಸಲಾತಿಯಿಂದ ಹೊರಗಿಟ್ಟು, ಸಾಮಾನ್ಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಇದನ್ನು ಸರಿಪಡಿಸುವಂತೆ ಕೆಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದರು. ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯೋತ್ಸವ ಪುರಸ್ಕೃತರಿಗೆ ನೆರವು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಅವರು ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಯವರು ಪುಟ್ಟಸ್ವಾಮಿ ಅವರಿಗೆ ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದರು.
3,812 ಅರ್ಜಿಗಳ ಸ್ವೀಕಾರ: ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟಾರೆ 3812 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಜನತಾ ದರ್ಶನ: ಸಿಎಂ ಸಿದ್ದರಾಮಯ್ಯ ಮುಂದೆ ಹಲವರಿಂದ ಅಹವಾಲು.. ಕೆಲವರಿಂದ ವಿಚಿತ್ರ ಬೇಡಿಕೆ