ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಹಣಾಹಣಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಒಟ್ಟಾಗಿ ವೀಕ್ಷಿಸಿದರು. ಶುಕ್ರವಾರ ಸಂಜೆ 7.30 ಸುಮಾರಿಗೆ ಸ್ಟೇಡಿಯಂಗೆ ತೆರಳಿ ಕೆಲ ಹೊತ್ತು ಕ್ರಿಕೆಟ್ ಪಂದ್ಯವನ್ನು ನೋಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಸಚಿವ ಭೈರತಿ ಸುರೇಶ್, ಎಂ.ಸಿ ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದ ರಾಜ್, ನಸೀರ್ ಅಹ್ಮದ್ ಸಾಥ್ ನೀಡಿದರು. ಸಿಎಂ ಮತ್ತು ಎಲ್ಲ ನಾಯಕರು ಕೆಲ ಹೊತ್ತು ಪಂದ್ಯ ವೀಕ್ಷಿಸಿ ಬಳಿಕ ತೆರಳಿದರು. ಹಾಗೆಯೇ, 2023ರ ಐಪಿಎಲ್ ವೇಳೆಯೂ ಸಿದ್ದರಾಮಯ್ಯ ಅವರು ಆರ್ಸಿಬಿ ಪಂದ್ಯವನ್ನು ಕ್ರೀಡಾಂಗಣಕ್ಕೆ ಆಗಮಿಸಿ ವೀಕ್ಷಣೆ ಮಾಡಿದ್ದರು.
ಪಂದ್ಯದ ಬಗ್ಗೆ: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಇತ್ತ ಪಾಕಿಸ್ತಾನ ಸತತ ಎರಡನೇ ಸೋಲು ಕಂಡಿತು. ಬೆಂಗಳೂರಲ್ಲಿ ನಡೆದ ಮೊದಲ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಪ್ರಿಯರು ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ್ದರು.
ಇದನ್ನೂ ಓದಿ : ವಿಶ್ವಕಪ್ ಕ್ರಿಕೆಟ್ : ವಾರ್ನರ್ 163, ಮಾರ್ಷ್ 121 ರನ್ ! ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ದಾಖಲೆಯ ಜತೆಯಾಟ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಪಡೆ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಕಲೆಹಾಕಿತು. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (163) ಮತ್ತು ಮಿಚೆಲ್ ಮಾರ್ಷ್ (121) ಅಮೋಘ ಶತಕ ಬಾರಿಸಿದರು. ಬೃಹತ್ ಗುರಿ ಬೆನ್ನತ್ತಿದ ಪಾಕ್ ತಂಡವು 45.3 ಓವರ್‌ಗೆ 305 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲುಂಡಿತು. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರಾದರೂ ಉತ್ತಮ ಜೊತೆಯಾಟ ಆಡದ ಕಾರಣ ಸೋಲನುಭವಿಸಬೇಕಾಯಿತು. ಹೀಗಾಗಿ, ವಿಶ್ವಕಪ್ನ 4 ಪಂದ್ಯದಲ್ಲಿ ಪಾಕ್ 2 ಸೋಲು ಹಾಗೂ 2 ಗೆಲುವು ಕಂಡಂತಾಗಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ ಆರಂಭಿಕರ ಸಿಡಿಲಬ್ಬರದ ಬ್ಯಾಟಿಂಗ್ : ಪಾಕಿಸ್ತಾನಕ್ಕೆ 368 ರನ್‌ಗಳ ಬೃಹತ್ ಗುರಿ
ಇನ್ನು ಬೆಂಗಳೂರಿನಲ್ಲಿ ಒಟ್ಟು 5 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ನಿನ್ನೆ ಪಾಕ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಉಳಿದಂತೆ, ಅಕ್ಟೋಬರ್ 20, ಅಕ್ಟೋಬರ್ 26, ನವೆಂಬರ್ 04, ನವೆಂಬರ್ 09, ನವೆಂಬರ್ 12 ರಂದು ಬೆಂಗಳೂರಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಇನ್ನೊಂದೆಡೆ, ಕ್ರಿಕೆಟ್ ಅಭಿಮಾನಿಗಳಿಗೆ ಅನುಕೂಲ ಮಾಡಿಕೊಟ್ಟಿರುವ ಬಿಎಂಟಿಸಿ, ವಿಶ್ವಕಪ್ ಪಂದ್ಯಗಳು ನಡೆಯುವ ಎಲ್ಲಾ ದಿನಗಳಲ್ಲೂ ಚಿನ್ನಸ್ವಾಮಿ ಸ್ಟೇಡಿಯಂ ಮಾರ್ಗವಾಗಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ : ವಿಶ್ವಕಪ್ ಕ್ರಿಕೆಟ್ : ಆಸ್ಟ್ರೇಲಿಯಾ ಭರ್ಜರಿ ಕಮ್ಬ್ಯಾಕ್. . ಪಾಕಿಸ್ತಾನಕ್ಕೆ ಸತತ ಎರಡನೇ ಸೋಲು