ಬೆಂಗಳೂರು: ವಿಶ್ವ ಯೋಗ ದಿನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಶುಭಾಶಯ ಕೋರಿದ್ದಾರೆ. "ಜಾತಿ, ಧರ್ಮ, ಪಂಥ, ಸಿದ್ಧಾಂತಗಳನ್ನು ತಳುಕುಹಾಕದೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡೋಣ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು" ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಸಹ ಟ್ವೀಟ್ ಮಾಡಿದ್ದು, "ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ನಮ್ಮ ಸಂಸ್ಕೃತಿ, ಪರಂಪರೆ ಯೋಗದಲ್ಲಿ ಅಡಗಿದೆ. ಪ್ರತಿ ದಿನ ಯೋಗಾಭ್ಯಾಸ ಆರೋಗ್ಯಕರ ಬದುಕಿನ ಹವ್ಯಾಸ. ನಾಡಿನ ಸಮಸ್ತರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು" ಎಂದಿದ್ದಾರೆ. ಹಾಗೆಯೇ, ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ಟ್ವೀಟ್ ಮಾಡಿ, "ಸರ್ವರಿಗೂ "ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಶಾಂತಿಯನ್ನು ಪಡೆದುಕೊಳ್ಳಲು ದೇಹಕ್ಕೆ ಯೋಗ ಅತ್ಯಗತ್ಯವಾಗಿದೆ. ಹೀಗಾಗಿ, ಎಲ್ಲರೂ ದಿನ ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳೋಣ" ಎಂದು ಕರೆ ನೀಡಿದ್ದಾರೆ.
ಸರ್ಕಾರದ ವತಿಯಿಂದ ಇಂದು ವಿಧಾನಸೌಧದ ಮುಂಭಾಗ ವಿಶ್ವ ಯೋಗ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು ಟಿ ಖಾದರ್, ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ಹೊರತುಪಡಿಸಿ ಸರ್ಕಾರದ ಬೇರೆ ಸಚಿವರು, ಶಾಸಕರು ಕಾಣಸಿಗಲಿಲ್ಲ. ಸಿಎಂ ದೆಹಲಿಯಲ್ಲಿರುವ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನಲ್ಲಿಯೇ ಇದ್ದರೂ ಬಂದಿರಲಿಲ್ಲ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಯೋಗಾಭ್ಯಾಸ : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಗಾಸನ ಮಾಡಿ ಯೋಗದ ಸಂದೇಶವನ್ನು ಸಾರಿದರು. ಆರೋಗ್ಯ ಪೂರ್ಣ ದೇಹಕ್ಕಾಗಿ ಪ್ರತಿಯೊಬ್ಬರೂ ಯೋಗ ಮಾಡುವ ರೂಢಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಆರ್ ಟಿ ನಗರದಲ್ಲಿರುವ ನಿವಾಸದಲ್ಲಿ ಬೊಮ್ಮಾಯಿ ಯೋಗಾಭ್ಯಾಸ ನಡೆಸಿದರು. ಯೋಗಾಸನದ ವಿವಿಧ ಭಂಗಿಗಳ ಪ್ರಯೋಗ ನಡೆಸಿ, ಕೆಲ ಸಮಯ ಯೋಗ ಹಾಗೂ ಧ್ಯಾನದ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು.
ಶುಭ ಕೋರಿದ ಬಿಎಸ್ವೈ : "ಜಗತ್ತಿಗೆ ಭಾರತದ ಕೊಡುಗೆಯಾಗಿರುವ ಯೋಗ ಕೇವಲ ವ್ಯಾಯಾಮ ಮಾತ್ರವಲ್ಲ, ಇದು ವ್ಯಕ್ತಿಗತ ಸಂಪೂರ್ಣ ಆರೋಗ್ಯ ಮತ್ತು ಪರಿಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳುವ ವಿಧಾನವೂ ಹೌದು. ಜೊತೆಗೆ ಸಾಮಾಜಿಕವಾಗಿ ಶಾಂತಿ, ಸಾಮರಸ್ಯವನ್ನು ಸಾಕಾರಗೊಳಿಸುವ ಯೋಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದು ಮಾಜಿ ಮುಖ್ಯಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಲ್ಲರಿಗೂ ಯೋಗ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ : ವಿಧಾನಸೌಧದ ಮುಂಭಾಗ ಯೋಗ ಪ್ರದರ್ಶನ, ರಾಜ್ಯಪಾಲರಿಂದ ಚಾಲನೆ
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಯೋಗ ದಿನಾಚರಣೆ : ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬೆಳಗ್ಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ ಮಂಜುನಾಥ್, ಗಾಂಧಿನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಪ್ತಗಿರಿ ಗೌಡ, ಪಕ್ಷದ ಪ್ರಮುಖರು ಮತ್ತು ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು. ಹೂವಿನ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು. ವಿವಿಧ ಯೋಗಾಸನ ಭಂಗಿಗಳನ್ನು ಅಭ್ಯಾಸ ಮಾಡಲಾಯಿತು.