ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿನ ಮಕ್ಕಳಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಶಾಲಾ-ಕಾಲೇಜು ಹಂತದಲ್ಲಿ ಕೈಗೊಳಬೇಕಾದ ಕ್ರಮಗಳು ಮತ್ತು ಶಾಲೆಗಳಲ್ಲಿ ಯಾವೆಲ್ಲ ಮುನ್ನೆಚ್ಚರಿಕಾ ಕ್ರಮವಹಿಸಬೇಕು? ವಸತಿ ಶಾಲೆಗಳಿಗೆ ಯಾವೆಲ್ಲ ಮಾರ್ಗಸೂಚಿ ನೀಡಬೇಕು ? ಮಾರ್ಗಸೂಚಿ ಹೇಗೆ ಪರಿಷ್ಕರಣೆ ಮಾಡಬೇಕು ಎನ್ನುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ, ಹಣಕಾಸು ಇಲಾಖೆ ಎಸಿಎಸ್ ಐಎಸ್ ಎನ್ ಪ್ರಸಾದ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಂದಿನ ಎರಡು ತಿಂಗಳು ಮಹತ್ವದ್ದಾಗಿದೆ. ಕೋವಿಡ್ ಸ್ಫೋಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾರ್ಗಸೂಚಿ ಮಾರ್ಪಾಡು ಮಾಡುವ ಸಂಬಂಧ ಮಹತ್ವದ ಸಮಾಲೋಚನೆ ನಡೆಸಲಾಯಿತು.
ಶೇ.100ರಷ್ಟು ಹಾಜರಾತಿಯನ್ನ ಶೇ.50ಕ್ಕೆ ಇಳಿಸುವ ಕುರಿತು, ಪಾಳಿ ಪದ್ದತಿಯಲ್ಲಿ ತರಗತಿ ನಡೆಸುವುದು, ಒಂದಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಮತ್ತೊಂದಷ್ಟು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಪಾಠಕ್ಕೆ ಒತ್ತು ನೀಡುವ ಕುರಿತು ಶಿಕ್ಷಣ ಇಲಾಖೆಯಿಂದ ಬಂದಿರುವ ಸಲಹೆ ಕುರಿತು ಚರ್ಚಿಸಲಾಯಿತು.
ಒಂದು ಕಡೆ ಮೆಡಿಕಲ್ ಕಾಲೇಜು ಕ್ಲಸ್ಟರ್ಗಳಾಗಿ ಪರಿವರ್ತನೆ ಆಗುತ್ತಿದ್ದರೆ, ಇತ್ತ ಶಾಲೆಯ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಸಂಬಂಧವೂ ಚರ್ಚೆ ನಡೆಯಿತು. ರಾಜ್ಯದ 34 ಶೈಕ್ಷಣಿಕ ಜಿಲ್ಲೆಯಲ್ಲಿ 130 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಇಲಾಖೆಯಿಂದ ಅಂಕಿ-ಅಂಶ ಬಿಡುಗಡೆಯಾಗಿದೆ. 1 ರಿಂದ 10ನೇ ತರಗತಿಯ ಮಕ್ಕಳಿಗೆ ಸೋಂಕು ತಗುಲಿದೆ. ಇದರಲ್ಲಿ ಈಗಾಗಲೇ ಹಲವರು ಗುಣಮುಖ ಆಗಿದ್ದಾರೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ ದಾಖಲು :
ಬೆಂಗಳೂರು ಉತ್ತರ | 2 |
ಚಾಮರಾಜನಗರ | 7 |
ಚಿಕ್ಕಮಗಳೂರು | 92 |
ಚಿತ್ರದುರ್ಗ | 2 |
ಧಾರವಾಡ | 2 |
ಗದಗ | 1 |
ಹಾಸನ | 4 |
ಕೊಡಗು | 11 |
ಮಧುಗಿರಿ | 5 |
ಮೈಸೂರು | 2 |
ಶಿವಮೊಗ್ಗ | 1 |
ಶಿರ್ಸಿ | 1 |
ತುಮಕೂರಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 35 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಆ 35 ಮಕ್ಕಳು ಗುಣಮುಖರಾಗಿದ್ದಾರೆ ಎನ್ನುವ ವಿವರ ಒದಗಿಸಿದರು.
ತರಗತಿವಾರು ಸೋಂಕಿತರ ಸಂಖ್ಯೆ :
ತರಗತಿ- ಮಕ್ಕಳು
ತರಗತಿ | ಸಂಖ್ಯೆ |
1ನೇ ತರಗತಿ | 02 |
2ನೇ ತರಗತಿ | 01 |
3ನೇ ತರಗತಿ | 04 |
4ನೇ ತರಗತಿ | 00 |
5ನೇ ತರಗತಿ | 01 |
6ನೇ ತರಗತಿ | 02 |
7ನೇ ತರಗತಿ | 00 |
8ನೇ ತರಗತಿ | 14 |
9ನೇ ತರಗತಿ | 03 |
10ನೇ ತರಗತಿ | 08 |
ಸರ್ಕಾರಿ ಶಾಲೆ ಮಕ್ಕಳಲ್ಲೇ ಹೆಚ್ಚು ಸೋಂಕು ಎನ್ನುವ ಅಂಶ ಸಭೆಯಲ್ಲಿ ಪ್ರಸ್ತಾಪವಾಯಿತು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯ ಮಕ್ಕಳಿಗೇ ಹೆಚ್ಚು ಸೋಂಕು ಹರಡಿದೆ. ಖಾಸಗಿ ಶಾಲೆಗಳು ಬೆರಳೆಣಿಕೆಯಷ್ಟು ಇದ್ದರೆ, ಸರ್ಕಾರಿ ಶಾಲೆ ಹೆಚ್ಚಿವೆ ಎಂದು ವಿವರಗಳೊಂದಿಗೆ ಸಿಎಂಗೆ ಮಾಹಿತಿ ನೀಡಲಾಯಿತು.
ವಿವರ :
- - ಸ್ಟ್ರೆಲ್ಲಾ ಮೇರಿಸ್ ಪ್ರೌಢಶಾಲೆ, ಮಲ್ಲೇಶ್ವರಂ ಬೆಂಗಳೂರು
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಸಂದ್ರ ಬೆಂಗಳೂರು
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಕ್ಕಲಪುರ
- - ಬಿ.ಎಮ್.ಹೆಚ್ ಹಿರಿಯ ಪ್ರಾಥಮಿಕ ಶಾಲೆ, ಕೊಳ್ಳೇಗಾಲ
- - ಹಿರಿಯ ಪ್ರಾಥಮಿಕ ಶಾಲೆ ಕೋಡಗಾಪುರ,ಚಾಮರಾಜನಗರ ನಗರ
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಬ್ಬಹಳ್ಳಿ, ಚಾಮರಾಜನಗರ
- - ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗುಂಡ್ಲುಪೇಟೆ
- - ಮೊರಾರ್ಜಿ ದೇಸಾಯಿ ವಸತಿ ಶಾಲೆ, ತರಕಣಾಂಬಿ
- - ಜವಾಹರ್ ನವೋದಯ ವಿದ್ಯಾಲಯ ಕೊಪ್ಪ ತಾಲ್ಲೂಕು ಚಿಕ್ಕಮಗಳೂರು
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜಿಕೆರೆ
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕತೇಕಲವಟ್ಟಿ
- - ಎಸ್ಆರ್ ಬೊಮ್ಮಯಿ ರೋಟರಿ ಶಾಲೆ ಹುಬ್ಬಳ್ಳಿ
- - ಸರ್ಕಾರಿ ಜೋಶಿ ಆಂಗ್ಲ ಮಾಧ್ಯಮ ಶಾಲೆ ಹುಬ್ಬಳ್ಳಿ
- - ಆದರ್ಶ ವಿದ್ಯಾಲಯ ಕೊರಳಾಹಳ್ಳಿ ಮುಂಡರಗಿ ತಾಲೂಕು
- - ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಕಲೇಶಪುರ
- - ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಸಿಬಿಎಸ್ಸಿ ಶಾಲೆ ಮಡಿಕೇರಿ
- - ಕಾರ್ಡಿಯಲ್ ಇಂಟರ್ನ್ಯಾಷನಲ್ ಶಾಲೆ ಮಧುಗಿರಿ
- -ಗಂಜಲಗುಂಟೆ ಸಿದ್ಧಗಂಗಾ ಪ್ರೌಢಶಾಲೆ ಮಧುಗಿರಿ
- - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಲ್ಲಹಳ್ಳಿ ಶಿರಾ
- - ಸೇಂಟ್ ಜೋಸೆಫ್ ಪ್ರೌಢಶಾಲೆ ಕೆಆರ್ ನಗರ
- - ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಮೈಸೂರು
- - ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಾಲೋನಿ ಭದ್ರಾವತಿ ಟೌನ್
ಕ್ಯಾಮ್ಸ್ ಮನವಿ ಪ್ರಸ್ತಾಪ : ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಎಸ್‌ಒಪಿ ನಿಯಮಗಳನ್ನು ಜಾರಿಗೊಳಿಸುವಂತೆ ಕ್ಯಾಮ್ಸ್ ಮನವಿ ಮಾಡಿದ್ದ ಕುರಿತು ಚರ್ಚೆ ನಡೆಸಲಾಯಿತು. ಕೋವಿಡ್ ನಿಯಂತ್ರಣಕ್ಕೆ ಬೇಕಾಗಿರುವಂತಹ ಪ್ರತ್ಯೇಕ ಎಸ್‌ಒಪಿ ಕೋಚಿಂಗ್ ಸೆಂಟರ್, ಟ್ಯುಟೋರಿಯಲ್, ಮನೆಪಾಠ, ವಸತಿ ಶಾಲೆಗಳಲ್ಲಿ ಮತ್ತು ಇತರೆ ಸಾಮಾಜಿಕ ಸ್ಥಳಗಳಿಗೆ ನಿಯಮಗಳನ್ನು ರಚಿಸಿ, ಪಾಲಿಸುವಂತೆ ಕ್ರಮಕೈಗೊಳ್ಳಲು ಸಂಘಟನೆಯಿಂದ ಬಂದಿರುವ ಮನವಿ ಕುರಿತು ಸಮಾಲೋಚಿಸಲಾಯಿತು.
ತಿಂಗಳ ಸಮಗ್ರ ಮಾಹಿತಿ ಪಡೆದ ಸಿಎಂ : ನವೆಂಬರ್ ತಿಂಗಳ ಕೋವಿಡ್ ವಿವರಗಳನ್ನು ಸಿಎಂಗೆ ನೀಡಲಾಯಿತು. ಪ್ರತಿ ದಿನ ನಡೆಸುತ್ತಿರುವ ಕೋವಿಡ್ ಪರೀಕ್ಷೆ, ಪಾಸಿಟಿವಿಟಿ ದರ, ಪತ್ತೆಯಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣ, ಗುಣಮುಖ ಸಂಖ್ಯೆ, ಸಾವಿನ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುತ್ತಿರುವವರು, ಆಮ್ಲಜನಕ ಐಸಿಯು ನೆರವು ಪಡೆದು ಚಿಕಿತ್ಸೆ ಪಡೆಯುತ್ತಿರುವವರ ಪ್ರಮಾಣ ಕುರಿತು ಸಮಗ್ರವಾಗಿ ಸಿಎಂ ಮಾಹಿತಿ ಪಡೆದರು.
ಒಮಿಕ್ರಾನ್ ಪತ್ತೆಯಾದ ನಂತರದ ಸ್ಥಿತಿಗತಿ ಕುರಿತು ಸಿಎಂ ಮಾಹಿತಿ ಪಡೆದರು. ಒಮಿಕ್ರಾನ್ ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರ ಪರೀಕ್ಷಾ ವಿವರಗಳನ್ನು ಸಿಎಂ ಪಡೆದುಕೊಂಡಿದ್ದಾರೆ. ಪಾಸಿಟಿವ್ ಬಂದ ಕೆಲವರ ಜೀನೋಮ್ ಸೀಕ್ವೆನ್ಸ್ ಪರೀಕ್ಷಾ ವರದಿ ನಿರೀಕ್ಷೆಯಲ್ಲಿರುವುದಾಗಿ ಅಧಿಕಾರಿಗಳು ಸಿಎಂಗೆ ಮಾಹಿತಿ ಒದಗಿಸಿದರು.
ಗಡಿ ಪ್ರದೇಶಗಳಲ್ಲಿ ಸೋಂಕಿನ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡ ಕ್ರಮ ಸೇರಿದಂತೆ ಎಲ್ಲಾ ವಿವರಗಳನ್ನು ಸಿಎಂ ಅಧಿಕಾರಿಗಳಿಂದ ಪಡೆದರು. ಬರುವ ದಿನಗಳಲ್ಲಿ ಹೊಸ ತಳಿ ಒಮಿಕ್ರಾನ್ ಮತ್ತು ಕ್ಲಸ್ಟರ್ ಆಗುತ್ತಿರುವ ಬಗ್ಗೆ ಯಾವ ಮಾರ್ಗಸೂಚಿ ಕೊಡಬೇಕು, ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಎಸ್‌ಒಪಿ ಜಾರಿ ಕುರಿತು ಅಧಿಕಾರಿಗಳಿಂದ ಸಿಎಂ ಬೊಮ್ಮಾಯಿ ವಿಸ್ತೃತ ಮಾಹಿತಿ ಪಡೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.