ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಪೊನ್ನುರಾಜ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸೇರಿದಂತೆ ಸರ್ಕಾರದ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು, ಕೇಂದ್ರ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಯಿಂದ ಆಗುತ್ತಿರುವ ಸರಬರಾಜು, ಹೆಸ್ಕಾಂಗಳ ಸ್ಥಿತಿಗತಿ, ವಿದ್ಯುತ್ ಉತ್ಪಾದನೆ, ಬೇಡಿಕೆ ಅಂತರ, ಜಲ ವಿದ್ಯುತ್, ಪವನ ಶಕ್ತಿ, ಅಣು ವಿದ್ಯುತ್ ಸ್ಥಾವರ ಮತ್ತು ಸೌರ ವಿದ್ಯುತ್ ಮೂಲಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು, ಕಲ್ಲಿದ್ದಲು ಪೂರೈಕೆ ಸಂಬಂಧ ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ತಿಳಿಸಿದ್ದಾರೆ.