ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನ ಹಾಗೂ ಉಪಸಭಾಪತಿ ಚುನಾವಣೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ವಿಧಾನ ಪರಿಷತ್ ಸದಸ್ಯರ ಸಭೆ ಕರೆದಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 6 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನದ ಕುರಿತು ವಿಸ್ತೃತವಾದ ಚರ್ಚೆ ನಡೆಯಲಿದೆ. ಸಭಾಪತಿ ಆಯ್ಕೆ ವಿಚಾರದಲ್ಲಿ ಪಕ್ಷದ ನಡೆ ಏನು? ಜೆಡಿಎಸ್ ಬೇಡಿಕೆಯಂತೆ ಸಭಾಪತಿ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟು, ಉಪಸಭಾಪತಿ ಸ್ಥಾನವನ್ನು ಪಡೆದುಕೊಳ್ಳಬೇಕಾ? ಇದಕ್ಕೆ ಬಿಜೆಪಿ ಸದಸ್ಯರ ಅಭಿಪ್ರಾಯ ಏನು? ಸಭಾಪತಿ ಸ್ಥಾನ ಬಿಜೆಪಿಗೇ ಬೇಕು ಎನ್ನುವುದಾದರೆ ಅನುಸರಿಸಬೇಕಾದ ಕಾರ್ಯತಂತ್ರ ಅಥವಾ ಉಪಸಭಾಪತಿ ಸ್ಥಾನಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಪರಿಷತ್ ಸದಸ್ಯರ ಜೊತೆ ಸಿಎಂ ಯಡಿಯೂರಪ್ಪ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಸಭಾಪತಿ ಸ್ಥಾನಕ್ಕೆ ಜೆಡಿಎಸ್ನಿಂದ ಬಸವರಾಜ ಹೊರಟ್ಟಿ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಜೆಡಿಎಸ್ಗೆ ಅವಕಾಶ ನೀಡಲು ಬಿಜೆಪಿ ಮಾನಸಿಕವಾಗಿ ಸಿದ್ಧವಾಗಿದೆ ಎನ್ನಲಾಗಿದೆ. ಈಗಾಗಲೇ ಹೈಕಮಾಂಡ್ ನಾಯಕರು ಹೊರಟ್ಟಿ ಬಗ್ಗೆ ರಾಜ್ಯ ಘಟಕದಿಂದ ಮಾಹಿತಿ ಪಡೆದಿದ್ದು, ಸಕಾರಾತ್ಮಕ ರೀತಿಯಲ್ಲಿ ರಾಜ್ಯ ಘಟಕ ಹೈಕಮಾಂಡ್ಗೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಸನಾ ಜೊತೆ ಚಾಟಿಂಗ್ ನಡೆಸಿದ್ದ ಕಾನ್ಸ್ಟೇಬಲ್ ಅರೆಸ್ಟ್