ಬೆಂಗಳೂರು: ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು, ಇದೇ ಮೊದಲ ಬಾರಿಗೆ ಸಿಎಂ ಅಧಿಕಾರಿಗಳ ಜತೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬರ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿದ್ದಾರೆ.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆ ರಾಜ್ಯದಲ್ಲಿ ಸಮರ್ಪಕ ಬರ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಪ್ರತಿಪಕ್ಷ ಬಿಜೆಪಿ ಬರ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತಿದೆ. ತೀವ್ರ ಬರಗಾಲದ ಮಧ್ಯೆಯೂ ಸಿಎಂ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ಮಾಡಲಾಗಿತ್ತು. ಇದೀಗ ಸಿಎಂ ಬರ ಪರಿಸ್ಥಿತಿಯ ಸಂಪೂರ್ಣ ಪರಿಶೀಲನೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಾಳೆ ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ.
ಈ ಸಂದರ್ಭದಲ್ಲಿ ಅವರು ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಸಂರಕ್ಷಣೆಗಾಗಿ ಮೇವು ಲಭ್ಯತೆ, ಗೋ ಶಾಲೆ ಹಾಗೂ ಮೇವು ಬ್ಯಾಂಕ್, ಉದ್ಯೋಗ ಸೃಜನ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಲಿದ್ದಾರೆ.