ಬೆಂಗಳೂರು: ಆರ್.ಆರ್.ನಗರ ರೋಡ್ ಶೋ ಮುಗಿಸಿದ ಸಿಎಂ ಯಡಿಯೂರಪ್ಪ ಕೊನೆಗೆ ಸಂಜೆ ಜಾಲಹಳ್ಳಿಯಲ್ಲಿ ಸಚಿವ ಆರ್.ಅಶೋಕ್ ನಿವಾಸದಲ್ಲಿ ಚಹಾ ಸೇವಿಸಿದರು.
ಈ ವೇಳೆ, ಅಭ್ಯರ್ಥಿ ಮುನಿರತ್ನ, ಸಚಿವರಾದ ಬಸವರಾಜ್ ಬೊಮ್ಮಾಯಿ, ಭೈರತಿ ಬಸವರಾಜ್ ಸಾಥ್ ನೀಡಿದರು. ರೋಡ್ ಶೋಗೆ ವ್ಯಕ್ತವಾದ ಪ್ರತಿಕ್ರಿಯೆ, ನಟ ದರ್ಶನ್ ಮತಯಾಚನೆ ಸಂಬಂಧ ಪರಸ್ಪರ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್.ಆರ್.ನಗರದಲ್ಲಿ ಮುನಿರತ್ನ ದಾಖಲೆ ಮತಗಳು ಪಡೆದು ಗೆಲ್ತಾರೆ. ಕಾಂಗ್ರೆಸ್ನವರು ಹತಾಶರಾಗಿದ್ದಾರೆ. ಇವತ್ತಿನಿಂದ ಕಾಂಗ್ರೆಸ್ನವರು ಹಣ ಹಂಚುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ರ್ಯಾಲಿ ವೇಳೆ ಪೊಲೀಸರ ಜಾಣ್ಮೆಯ ನಡೆ: ಇತ್ತ ಸಿಎಂ ಪ್ರಚಾರ ವೇಳೆ ಪೊಲೀಸರು ಜಾಣ್ಮೆಯ ನಡೆ ಪ್ರದರ್ಶಿಸಿದರು. ಗೊರಗುಂಟೆಪಾಳ್ಯದ ಮುಖ್ಯರಸ್ತೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಮುಖಾಮುಖಿಯಾದರು. ಗೊರಗುಂಟೆಪಾಳ್ಯದ ಮುಖ್ಯ ರಸ್ತೆಯಲ್ಲೇ ಡಿ.ಕೆ.ಶಿವಕುಮಾರ್ ಹಾದು ಹೋದರು. ಈ ವೇಳೆ ಬಿಜೆಪಿ - ಕಾಂಗ್ರೆಸ್ ನಾಯಕರ ಮುಖಾಮುಖಿಯಾಗುವುದನ್ನು ಪೊಲೀಸರು ತಪ್ಪಿಸಿದರು.
ಕಾಂಗ್ರೆಸ್ ಬಿಜೆಪಿ ನಡುವೆ ಯಾವುದೇ ಸಂಘರ್ಷಗಳು ಆಗದ ರೀತಿಯಲ್ಲಿ ಗೊಂದಲಕ್ಕೆ ಕಾರಣವಾಗದೇ ಜಾಣ್ಮೆಯಿಂದ ವಾಹನಗಳು ತೆರಳುವಂತೆ ನೋಡಿಕೊಂಡರು. ಕಾಂಗ್ರೆಸ್ ನಾಯಕರ ವಾಹನಗಳನ್ನು ಹೋಗಲು ಮೊದಲು ಅವಕಾಶ ಕೊಟ್ಟ ಪೊಲೀಸರು, ಬಳಿಕ ಬಿಜೆಪಿ ನಾಯಕರ ವಾಹನಗಳಿಗೆ ಅವಕಾಶ ಕೊಟ್ಟರು.
ಸಂಪತ್ ರಾಜ್ ಬಂಧನ ಆಗುತ್ತದೆ:
ಆರ್.ಅಶೋಕ್ ನಿವಾಸದಲ್ಲಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಸಂಪತ್ ರಾಜ್ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಂಪತ್ ರಾಜ್ ಅವರನ್ನ ಹುಡುಕೋ ಕೆಲಸ ಆಗ್ತಿದೆ. ಸಂಪತ್ ರಾಜ್ ಅರೆಸ್ಟ್ ಆಗ್ತಾರೆ ಎಂದು ಸ್ಪಷ್ಟಪಡಿಸಿದರು.
ಅವರ ನಾಪತ್ತೆ ಪ್ರಕರಣದಲ್ಲಿ ಆಸ್ಪತ್ರೆಯ ಪಾತ್ರದ ಬಗ್ಗೆಯೂ ತನಿಖೆ ಮಾಡ್ತೇವೆ. ಸಂಪತ್ ರಾಜ್ ಬಂಧನ ವಿಚಾರದಲ್ಲಿ ರಾಜಕೀಯ ಒತ್ತಡಗಳಿಲ್ಲ ಎಂದರು.