ಬೆಂಗಳೂರು: ಕೊಟ್ಟ ಕುದುರೆ ಏರಲಾಗದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮ ಪ್ರಭುಗಳ ವಚನದ ರೀತಿ ಮುಖ್ಯಮಂತ್ರಿಗಳು ಅಧಿಕಾರ ಸಿಕ್ಕಾಗ ಕೆಲಸ ಮಾಡಲಾಗದೇ ಈಗ ಕಾಂಗ್ರೆಸ್ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಒತ್ತುವರಿ ಆಗಿದ್ದರೆ ಈ ಸರ್ಕಾರ ಅದನ್ನು ತೆರವುಗೊಳಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಇಂತಹ ದುಃಸ್ಥಿತಿ ನಿರ್ಮಾಣವಾಗಿರಲಿಲ್ಲ. ನಿಮ್ಮ ಸರ್ಕಾರ, ಅಧಿಕಾರಿಗಳ ಭ್ರಷ್ಟಾಚಾರದಿಂದ ಬೆಂಗಳೂರಿಗೆ ಈ ಸ್ಥಿತಿ ಬಂದಿದೆ. ಅಧಿಕಾರ ಈಗ ಅವರ ಕೈಯಲ್ಲಿದೆ. ಅವರಿಗೆ ಕೆಲಸ ಮಾಡಲಾಗದಿದ್ದರೆ ಚುನಾವಣೆಗೆ ಹೋಗೋಣ ಎಂಬುದನ್ನು ಮುಖ್ಯಮಂತ್ರಿಗಳು ಅರಿಯಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಬೆಂಗಳೂರು ಬಡಾವಣೆಗಳ ಮುಳುಗಡೆಗೆ ಕಾಂಗ್ರೆಸ್ ಯೋಜನಾ ರಹಿತ ಆಡಳಿತ ಕಾರಣ: ಸಿಎಂ ಆರೋಪ
ಬೆಂಗಳೂರಿನ ಈ ಕೆಟ್ಟ ಸಮಯದಲ್ಲಿ ನಾವು ರಾಜಕೀಯ ಮಾಡಲು ಬಯಸುವುದಿಲ್ಲ. ಬೆಂಗಳೂರಿನ ಘನತೆ ಮರುಸ್ಥಾಪಿಸುವ ಬಗ್ಗೆ ನಾವು ಗಮನಹರಿಸುತ್ತೇವೆ. ಅವರು (ಬೊಮ್ಮಾಯಿ) ನಮ್ಮ ಮೇಲೆ ಆರೋಪ ಮಾಡುವ ಬದಲು, ಕಳೆದ ಮೂರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೆ ಅದನ್ನು ಗುರುತಿಸಿ ಸರಿಪಡಿಸಬಹುದಾಗಿತ್ತು. ಈ ಕೆಲಸ ಮಾಡದಂತೆ ಅವರನ್ನು ತಡೆದವರು ಯಾರು ಎಂದು ಡಿಕೆಶಿ ಪ್ರಶ್ನಿಸಿದರು.
ಕೆಲಸದ ವಿಚಾರದಲ್ಲಿ ಅವರನ್ನು ಯಾರೂ ತಡೆಯುತ್ತಿಲ್ಲ. ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದು, ಬಿಟ್ಟರೆ ಉಳಿದಂತೆ ಯಾವ ಅಗತ್ಯ ಕ್ರಮ ಕೈಗೊಳ್ಳಲಾಗಿದೆ?. ಮುಖ್ಯಮಂತ್ರಿಗಳಿಗೆ ಬೆಂಗಳೂರು ಜನರ ಮೇಲೆ ನಂಬಿಕೆ ಇಲ್ಲ. ಬೆಂಗಳೂರು ಹಾಗೂ ಕರ್ನಾಟಕದ ರಾಜ್ಯದ ಬಗ್ಗೆ ದೂರದೃಷ್ಟಿ ಇಲ್ಲ. ಅವರು ಕೇವಲ ತೆರಿಗೆದಾರರ ಹಣದ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಟೀಕಿಸಿದರು.
ನಮಗೆ ದಕ್ಷ ಆಡಳಿತ ಬೇಕಾಗಿದೆ : ದೇಶದ ರಫ್ತು ತೆರಿಗೆಯಲ್ಲಿ ಸುಮಾರು ಶೇ.29ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ರಾಜ್ಯ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ನಮಗೆ ದಕ್ಷ ಆಡಳಿತ ಬೇಕಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ಬೆಂಗಳೂರಿನ ಜನರಿಗಾಗಿ ದೂರದೃಷ್ಟಿಯನ್ನು ಹೊಂದಿದ್ದು, ಬೆಂಗಳೂರನ್ನು ಎಲ್ಲ ಬಂಡವಾಳ ಹೂಡಿಕೆದಾರರ ಸುರಕ್ಷಿತ ಪ್ರದೇಶವನ್ನಾಗಿ ಮಾಡಲು ಸಿದ್ಧವಿದೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: ಡಿಕೆಶಿ ಸವಾಲು ಸ್ವೀಕರಿಸಿದ ಸುನೀಲ್ ಕುಮಾರ್!
ಕಾಂಗ್ರೆಸ್ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮೊದಲು ಆರಂಭಿಸಿತು. ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಅವರು ಕೇವಲ ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಬೇರೆಯವರ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದು, ರಾಜ್ಯದ ಜನ ಎಲ್ಲವನ್ನು ನೋಡುತ್ತಿದ್ದಾರೆ. ಸಮಯ ಬಂದಾಗ ಜನರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬೆಂಗಳೂರಿನ ವೈಭವ ಮರಳಿ ತರುತ್ತೇವೆ: ರಾಜ್ಯದೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಶೇ.40ರಷ್ಟು ಕಮಿಷನ್ ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅದು ಶೇ.50ಕ್ಕೆ ತಲುಪಿದೆ. ಇದು ಬೆಂಗಳೂರಿನ ದುಃಸ್ಥಿತಿ. ಮುಖ್ಯಮಂತ್ರಿಗಳು ಕೇವಲ ಆರೋಪ ಮಾಡಲಷ್ಟೇ ಸೀಮಿತವಾಗಿದ್ದು, ಕಾಂಗ್ರೆಸ್ ತಪ್ಪು ಮಾಡಿದ್ದರೆ ಸಾಬೀತುಪಡಿಸಲಿ. ನಾವು ಅದರ ಹೊಣೆ ಹೊರಲು ಸಿದ್ಧರಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಬೆಂಗಳೂರಿನ ಸ್ಥಿತಿ ಉತ್ತಮವಾಗಿಸಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಬೆಂಗಳೂರು ಹಾಗೂ ರಾಜ್ಯದ ಜನತೆ ನಮಗೆ ಅವಕಾಶ ನೀಡಲಿ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಮತ್ತೆ ಬೆಂಗಳೂರಿನ ವೈಭವ ಮರಳಿ ತರುತ್ತೇವೆ ಎಂದರು.
ಇದನ್ನೂ ಓದಿ: ಬೆಂಗಳೂರು ಪೂರ್ತಿ ಮುಳುಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಕಾಂಗ್ರೆಸ್ ಕಾಲದ ಹಗರಣದ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅವರು ಈ ವಿಚಾರದಲ್ಲಿ ತಡ ಯಾಕೆ ಮಾಡುತ್ತಿದ್ದಾರೆ. ಅವರು ಒಂದು ನಿಮಿಷ ವ್ಯರ್ಥ ಮಾಡದೇ ತನಿಖೆ ಮಾಡಿಸಲಿ. ಕೇವಲ ಖಾಲಿ ಮಾತುಗಳನ್ನು ಆಡುವುದು ಬೇಡ. ನಮ್ಮ ತಪ್ಪಿದ್ದರೆ ಸಾಬೀತು ಮಾಡಿ ನಮ್ಮನ್ನು ಗಲ್ಲಿಗೇರಿಸಲಿ. ನನ್ನ ಮೇಲೆ ಮಾತ್ರ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿ ಸಿಬಿಐಗೆ ನೀಡಿಲ್ಲವೇ?. ಬೇರೆ ಯಾರೂ ಅಕ್ರಮ ಆಸ್ತಿ ಸಂಪಾದಿಸಿಲ್ಲವೇ?. ಇಂತಹ ಗೊಡ್ದು ಬೆದರಿಕೆಗಳಿಗೆ ಡಿಕೆ ಶಿವಕುಮಾರ್ ಹೆದರುವ ಮಗ ಅಲ್ಲ ಎಂದು ಕಿಡಿಕಾರಿದರು.
ಪಿಎಸ್ಐ ಅಕ್ರಮದ ನ್ಯಾಯಾಂಗ ತನಿಖೆ ಆಗಲಿ: ಪಿಎಸ್ಐ ಅಕ್ರಮದಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರದ್ದು ಒಂದು ಸಣ್ಣ ಕೈ. ಅವರ ಮಾತಿನಂತೆ ಸರ್ಕಾರ ಎಂದರೆ ಯಾರು?. ಸರ್ಕಾರ ಎಂದರೆ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು. ಇದಕ್ಕಾಗಿಯೇ ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದೇವೆ. ನ್ಯಾಯಾಂಗ ತನಿಖೆಯಿಂದ ಸತ್ಯ ಹೊರ ಬರುತ್ತಿದೆ ಎಂದು ಡಿಕೆಶಿ ಹೇಳಿದರು.
ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಅಕ್ರಮದ ಬಗ್ಗೆ ಮಾತನಾಡಿದ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಅವರನ್ನು ಹೆದರಿಸಲು ನೋಟಿಸ್ ನೀಡಿದ್ದರು. ವಿಶ್ವನಾಥ್, ಯತ್ನಾಳ್ ಹಾಗೂ ಬಸವರಾಜ ಅವರು ಸತ್ಯ ಹೇಳಿದ್ದರೂ ಈಗ ಸುಮ್ಮನಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ಸಚಿವ ಮಾಧುಸ್ವಾಮಿಗಳು ಹೇಳಿದಂತೆ ನೀವು ಸರ್ಕಾರವನ್ನು ತಳ್ಳುತ್ತಿದ್ದೀರಿ ಅಷ್ಟೇ. ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಸರ್ಕಾರವನ್ನು ತಳ್ಳಿ ಎಂದು ಗೇಲಿ ಮಾಡಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಬಿಜೆಪಿ ಶಾಸಕ ದಡೇಸಗೂರು ವಿರುದ್ಧ ತನಿಖೆ ಸುಳಿವು ನೀಡಿದ ಸಿಎಂ