ಬೆಂಗಳೂರು: ನಾಯಕತ್ವ ಬದಲಾವಣೆ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆಪ್ತರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೋಜನಕೂಟದ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಏನು ಬೇಕಾದರೂ ಬದಲಾವಣೆ ಆಗಬಹುದು, ಸಿದ್ಧವಾಗಿರಿ ಎಂದು ಆಪ್ತರಿಗೆ ಸಿಎಂ ಸಂದೇಶ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಗರಿಗೆದರುತ್ತಿದ್ದಂತೆ ರೇಸ್ ಕೋರ್ಸ್ ರಸ್ತೆಯ ಖಾಸಗಿ ತಾರಾ ಹೋಟೆಲ್ಗೆ ಆಪ್ತ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೋಜನಕೂಟಕ್ಕೆ ತೆರಳಿದ್ದಾರೆ. ಹೈಕಮಾಂಡ್ ಭೇಟಿ ನಂತರ ನಾಯಕತ್ವ ಬದಲಾವಣೆ ವಿಷಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಆಪ್ತರ ಜೊತೆ ವಿಸ್ತೃತ ಚರ್ಚೆ ಮಾಡಿಲ್ಲ. ಹಾಗಾಗಿ ಒಂದಷ್ಟು ಚರ್ಚೆ ನಡೆಸಲು ಭೋಜನಕೂಟದ ನೆಪದಲ್ಲಿ ಆಪ್ತರೊಂದಿಗೆ ಸಿಎಂ ಸಭೆ ನಡೆಸಿದರು.
ಸಿಎಂ ಕರೆದ ಭೋಜನಕೂಟದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಆರೋಗ್ಯ ಸಚಿವ ಡಾ.ಸುಧಾಕರ್, ಸಹಕಾರ ಸಚಿವ ಸೋಮಶೇಖರ್ ಭಾಗಿಯಾಗಿದ್ದು, ಶಾಸಕರಾದ ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ ಕೂಡ ಪಾಲ್ಗೊಂಡಿದ್ದರು.
ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟವಾಗಿ ಏನೂ ಹೇಳದೇ ಇದ್ದರೂ ಜುಲೈ 26 ರಂದು ಸರ್ಕಾರದ ಎರಡು ವರ್ಷದ ಸಾಧನಾ ಸಮಾರಂಭದ ಕುರಿತು ಮಾತುಕತೆ ನಡೆಸಿದ್ದಾರೆ. ಅಂದು ಯಾವ ಬೆಳವಣಿಗೆ ಬೇಕಾದರೂ ನಡೆಯಬಹುದು ಎಂದು ಸೂಚ್ಯವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದ್ದಾರೆ ಎನ್ನಲಾಗಿದೆ.