ಬೆಂಗಳೂರು: ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ ಬೆನ್ನಲ್ಲೇ ನಾಯಕತ್ವ ಬದಲಾವಣೆ ವದಂತಿ, ಸಂಪುಟ ಸರ್ಕಸ್ಗೆ ತೆರೆ ಬೀಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಭೋಜನ ಕೂಟದ ಸಭೆ ಕೇವಲ ಉಭಯ ಕುಶಲೋಪರಿಗೆ ಸೀಮಿತವಾದ ಹಿನ್ನೆಲೆ ರಾಜ್ಯ ಬಿಜೆಪಿಯಲ್ಲಿನ ಗೊಂದಲ ಹಾಗೆಯೇ ಉಳಿಯುವಂತಾಯಿತು. ಸಂಪುಟ ಬದಲಾವಣೆ ಚೆಂಡು ಮತ್ತೆ ದೆಹಲಿ ಅಂಗಳಕ್ಕೆ ತಲುಪುವಂತಾಗಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮುನ್ನಲೆಗೆ ಬರುತ್ತಿದೆ. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರೂ, ಬದಲಾವಣೆ ಕುರಿತ ಚರ್ಚೆ ಮಾತ್ರ ಮುಂದುವರೆದಿದೆ. ಇದರ ಜೊತೆಗೆ ಇಡೀ ಸರ್ಕಾರವೇ ಬದಲಾಗಲಿದೆ, ಮುಖ್ಯಮಂತ್ರಿ ಉಳಿಸಿಕೊಂಡು ಚುನಾವಣಾ ಕ್ಯಾಬಿನೆಟ್ ರಚಿಸಲಾಗುತ್ತದೆ. ಅಲ್ಪ ಪ್ರಮಾಣದ ಬದಲಾವಣೆ ನಡೆಯಲಿದೆ ಎಂದು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಅಷ್ಟು ಸಾಲದು ಎನ್ನುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಇಷ್ಟು ದಿನ ಬೊಮ್ಮಾಯಿ ಪರ ಬ್ಯಾಟಿಂಗ್ ಮಾಡುತ್ತಾ ಬಂದು, ಈಗ ಮೇ10 ರಂದು ಮುಖ್ಯಮಂತ್ರಿ ಬದಲಾಗಲಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಯಾಗಿದೆ.
ಊಟಕ್ಕೆ ಸೀಮಿತವಾದ ಭೋಜನ ಕೂಟ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೊಂದಲ ಪರಿಹಾರ ಕುರಿತು ಯಾವುದೇ ಪ್ರಯತ್ನ ನಡೆಸಲಿಲ್ಲ. ಪಕ್ಷದ ಕಚೇರಿಯಲ್ಲಿ ಪ್ರಮುಖರ, ಕೋರ್ ಕಮಿಟಿ ಸದಸ್ಯರ ಜೊತೆ ನಿಗದಿಯಾಗಿದ್ದ ವಿಶೇಷ ಸಭೆಯನ್ನು ಅಮಿತ್ ಶಾ ವಾಸ್ತವ್ಯ ಹೂಡಿದ್ದ ಹೋಟೆಲ್ಗೆ ಸ್ಥಳಾಂತರ ಮಾಡಲಾಯಿತು. ಆದರೆ ಕೊನೆ ಕ್ಷಣದಲ್ಲಿ ಆ ಸಭೆಯನ್ನೂ ರದ್ದುಗೊಳಿಸಲಾಯಿತು. ನಂತರ ಸಿಎಂ ಆಯೋಜನೆ ಮಾಡಿದ್ದ ಭೋಜನ ಕೂಟದಲ್ಲೇ ಸಭೆ ನಡೆಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಅದೂ ಕೂಡ ಆಗಲಿಲ್ಲ. ಭೋಜನ ಕೂಟ ಕೇವಲ ಊಟಕ್ಕೆ ಸೀಮಿತವಾಯಿತು.
ಸಭೆ ಕುರಿತು ಮಾತನಾಡಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇಂದು ರಾಜಕೀಯ ವಿಷಯದ ಕುರಿತು ಯಾವುದೇ ಚರ್ಚೆ ಆಗಿಲ್ಲ. ಒಳಗಡೆ ಊಟ ಮಾಡಿದೆವು ಅಷ್ಟೇ. ನಮಗೆಲ್ಲಾ ಅಮಿತ್ ಶಾ ವಿಶ್ ಮಾಡಿದರು, ಹೋದರು. ನಾನು ಸಚಿವ ಸ್ಥಾನದ ಆಕಾಂಕ್ಷಿ, ಹೇಳಬೇಕಿರುವುದನ್ನೆಲ್ಲಾ ಹೇಳಿ ಆಗಿದೆ. ಈಗ ಮತ್ತೆ ಹೇಳುವುದಕ್ಕೆ ಏನೂ ಇಲ್ಲ ಎನ್ನುತ್ತಾ ನಿರ್ಗಮಿಸಿದರು.
ವಸತಿ ಸಚಿವ ಸೋಮಣ್ಣ ಕೂಡ ರಾಜಕೀಯ ಚರ್ಚೆಯನ್ನು ನಿರಾಕರಿಸಿದರು. ಕೇವಲ ಭೋಜನ ಕೂಟ ನಡೆಯಿತು. ಇದು ನಮ್ಮ ಅವರ ವಿಷಯ ಅಷ್ಟೇ ಎನ್ನುತ್ತಾ ಇಂದಿನ ಭೋಜನ ಕೂಟದ ರಹಸ್ಯವನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಇದನ್ನೂ ಓದಿ: ಬಸವಣ್ಣನ ವಚನ, ಆದರ್ಶ ಪಾಲಿಸಿ ಅವರಂತೆ ಜೀವನ ಮಾಡಬೇಕು: ಅಮಿತ್ ಶಾ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಅಮಿತ್ ಶಾ ನಮ್ಮನ್ನೆಲ್ಲಾ ಉದ್ದೇಶಿಸಿ ಸ್ವಲ್ಪ ಮಾತನಾಡಿದರು. ನಮ್ಮ ನಾಯಕರ ಜೊತೆ ಊಟ ಮಾಡಿದರು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿಲ್ಲ ಎಂದರು.
ಜಗದೀಶ್ ಶೆಟ್ಟರ್ಗೆ ಧಾರವಾಡ ಪೇಡ ಸಿಗುತ್ತಾ ಎಂಬ ಪ್ರಶ್ನೆಗೆ ನಾನು ಹಾಗೇನು ತಿಳಿದುಕೊಂಡಿಲ್ಲ. ಅದನ್ನ ನೀವೇ ಹೇಳ್ತಿರೋದು. ದೆಹಲಿಯಲ್ಲಿ ವರಿಷ್ಠರು ಶೆಟ್ಟರ್ಗೆ ಸಿಗ್ತಾರೆ, ಸಿಎಂಗೆ ಸಿಗಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ಅದು ಹಳೆಯ ವಿಷಯ ರೀ, ಇವತ್ತು ಸರ್ಕಾರಿ ಕಾರ್ಯಕ್ರಮ ಅದಕ್ಕೆ ಬಂದಿದ್ದರು. ಇಲ್ಲಿ ಭೋಜನಕ್ಕೆ ಬಂದಿದ್ದರು. ಸಂಜೆ ಕೂಡ ಕಾರ್ಯಕ್ರಮ ಇದೆ. ಅಲ್ಲಿಗೂ ಅವರು ಹೋಗ್ತಾರೆ. ಇಲ್ಲಿ ಸಂಪುಟ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ ಎಂದರು.