ಬೆಂಗಳೂರು : ಹುಟ್ಟುಹಬ್ಬದ ದಿನದಂದೇ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶ ನಡೆಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿದ್ಧತೆ ನಡೆಸಿದ್ದು, ನಾಳೆ ಕಾವೇರಿ ನಿವಾಸದಲ್ಲಿ ಪೂಜಾ ಕೈಂಕರ್ಯ ನಡೆಸಲಿದ್ದಾರೆ.
ನಾಳೆ ಸಿಎಂ ಯಡಿಯೂರಪ್ಪ ಅವರ 78ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಧಿಕೃತ ನಿವಾಸ ಕಾವೇರಿ ಬಂಗಲೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಕಾವೇರಿ ನಿವಾಸದ ರಸ್ತೆಗೆ ಡಾಂಬರೀಕರಣ, ನಿವಾಸದ ಗೋಡೆಗೆ ಸುಣ್ಣ ಬಣ್ಣ ಬಳಿದು ಪೀಠೋಪಕರಣಗಳ ದುರಸ್ಥಿ ಕಾರ್ಯ ಪೂರ್ಣಗೊಳಿಸಲಾಗಿದೆ. ನಾಳೆ ಬೆಳಗ್ಗೆಯೇ ನಿವಾಸದಲ್ಲಿ ಕುಟುಂಬ ಸದಸ್ಯರ ಜೊತೆಯಲ್ಲಿ ಪೂಜಾ ಕೈಂಕರ್ಯ, ಹೋಮ, ಹವನ ನಡೆಸಲಿದ್ದಾರೆ.
ನಾಳೆ ಸರ್ಕಾರಿ ಬಂಗಲೆ ಪೂಜಾ ಕಾರ್ಯ ನೆರವೇರಿಸಿದರೂ ನಾಳೆಯಿಂದಲೇ ಸರ್ಕಾರಿ ನಿವಾಸದಲ್ಲಿ ಸಿಎಂ ವಾಸ್ತವ್ಯ ಸಾಧ್ಯತೆ ಕಡಿಮೆ ಇದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಎಂ ಬಜೆಟ್ ಮಂಡನೆ ನಂತರ ಕಾವೇರಿ ನಿವಾಸಕ್ಕೆ ಪೂರ್ಣ ಪ್ರಮಾಣದಲ್ಲಿ ವಾಸ್ತವ್ಯ ಸ್ಥಳಾಂತರ ಮಾಡಲಿದ್ದಾರೆ ಎನ್ನಲಾಗಿದೆ.
ಕಾವೇರಿ ನಿವಾಸದ ಮುಂದೆ ಸಂಚಾರ ನಿರ್ಬಂಧ: ನಾಳೆ ಮನೆ ಪ್ರವೇಶ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಾಧ್ಯಮಗಳಿಗೆ ಕಾವೇರಿ ನಿವಾಸದ ಮುಂದೆ ಹೋಗಲು ಇವತ್ತಿನಿಂದಲೇ ಪೊಲೀಸರು ಪ್ರವೇಶ ನಿರ್ಬಂಧ ವಿಧಿಸಿದ್ದಾರೆ.