ಬೆಂಗಳೂರು: ತುಮಕೂರು-ಶಿವಮೊಗ್ಗ ಹೆದ್ದಾರಿ ಯೋಜನೆಗೆ ತೊಡಕಾಗಿರುವ ತುಮಕೂರು ಪಟ್ಟಣದ ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಗಳನ್ನು ಬಗೆಹರಿಸಿ ಹೆದ್ದಾರಿ ಯೋಜನೆಯನ್ನು ತ್ವರಿತಗೊಳಿಸುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ರು.
ಇಂದು ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಈ ವೇಳೆ ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಹಾದು ಹೋಗುವ ಜಾಗದಲ್ಲಿರುವ ಕರೆಗಳ ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಹೆದ್ದಾರಿ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಶಿವಮೊಗ್ಗ ಕ್ಷೇತ್ರದ ಸಂಸದರು ಮಲೆನಾಡು ಭಾಗದಲ್ಲಿ ತಲೆದೋರಿರುವ ನೆಟ್‌ವರ್ಕ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ಥಾಪಿಸಿ, ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಖಾಸಗಿ ಕಂಪನಿಗಳ ಜೊತೆಗೂಡಿ ಹೆಚ್ಚಿನ ಟವರ್ಗಳನ್ನು ಮಲೆನಾಡು ಭಾಗದಲ್ಲಿನ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಭಾಗದಲ್ಲಿ ಯಾವುದೇ ರೀತಿಯ ನೆಟ್ವರ್ಕ್ಗಳ ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಟವರ್ಗಳನ್ನು ನಿರ್ಮಾಣ ಮಾಡುವಂತೆ ಖಾಸಗಿ ಟೆಲಿಕಾಮ್ ಕಂಪನಿಗಳಿಗೆ ಸೂಚಿಸಿದರು. ಇದರ ಜೊತೆಗೆ ಅಗತ್ಯವಿರುವ ನೆರವು ನೀಡುವುದಾಗಿ ಭರವಸೆ ನೀಡಲಾಯಿತು.
ಇನ್ನು ಸಿಗಂದೂರು ಸೇತುವೆ ನಿರ್ಮಣ ಒಟ್ಟು ಉದ್ದ 2.4 ಕಿಲೋ ಮೀಟರ್ ಇದ್ದು, ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಆದಷ್ಟು ಬೇಗ ಕೆಲಸ ಆರಂಭ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು. ಶಿವಮೊಗ್ಗ ಸುತ್ತ ಉದ್ದೇಶಿಸಲಾಗಿರುವ 2 ಲೈನ್ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ರೈಲ್ವೆ ಭೂ ಸ್ವಾದೀನಕ್ಕಿದ್ದ ಸಮಸ್ಯೆ ಬಗೆಹರಿಸಿ ಆದಷ್ಟು ಬೇಗ ರಿಂಗ್ ರಸ್ತೆ ನಿರ್ಮಾಣ ಮಾಡಲು ಸೂಚನೆ ನೀಡಲಾಯಿತು.
ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಶಿವಮೊಗ್ಗ ಕ್ಷೇತ್ರದ ಸಂಸದ ರಾಘವೇಂದ್ರ ಪಾಲ್ಗೊಂಡಿದ್ದರು.