ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸಿಎಂ ಸ್ಪಷ್ಟೀಕರಣ: ಇಂದಿನ ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಜಯಮೃತ್ಯುಂಜಯ ಸ್ವಾಮೀಜಿಗಳು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಮಾಧ್ಯಮ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ನಾನು ಇಂದಿನ ಅಧಿವೇಶನದಲ್ಲಿ ಕೇವಲ ಹೇಳಿದ್ದಿಷ್ಟು. ನಮ್ಮದೊಂದು ರಾಷ್ಟ್ರೀಯ ಪಕ್ಷವಾಗಿದ್ದರಿಂದ ಎಲ್ಲಾ ಸಂಸತ್ ಸದಸ್ಯರ ಜೊತೆ ಚರ್ಚಿಸಿ ಮುಂದೆ ರಾಷ್ಟ್ರೀಯ ನಾಯಕರೊಂದಿಗೆ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ನಮ್ಮ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿರುವುದನ್ನು ಈ ಸಂದರ್ಭದಲ್ಲಿ ನನೆಪಿಸಿಕೊಳ್ಳಬಹುದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲಾ ಸಮುದಾಯಗಳ ಒಳಿತಿಗೆ ನಾನು ಬದ್ಧನಾಗಿದ್ದೇನೆ. ಇಂತಹ ಗಂಭೀರ ವಿಷಯಗಳ ಬಗ್ಗೆ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದೆ, ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕಾಗುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ತಿಳಿಸಿದ್ದಾರೆ.