ಬೆಂಗಳೂರು: ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಸಂಪೂರ್ಣ ಖಾಸಗೀಕರಣ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂಡ್ಯ ಮೈಶುಗರ್ ಕಾರ್ಖಾನೆಯ ಮಾಲೀಕತ್ವವನ್ನು ರಾಜ್ಯ ಸರ್ಕಾರವೇ ಇಟ್ಟುಕೊಳ್ಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಒಪ್ಪಿಸಲು ಸಿಎಂ ಯಡಿಯೂರಪ್ಪ ಸಮ್ಮತಿ ಸೂಚಿಸಿಲ್ಲ.
ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಚರ್ಚೆಗೆ ತರಲು ಸೂಚನೆ ನೀಡಿದ್ದಾರೆ. ಆಪರೇಷನ್ ಅಂಡ್ ಮ್ಯಾನೇಜ್ಮೆಂಟ್ ಅಡಿ ಮೈ ಶುಗರ್ ಕಾರ್ಖಾನೆ ಉಳಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ. ಕಾರ್ಖಾನೆಯ ಮಾಲೀಕತ್ವ ಸರ್ಕಾರದ ಬಳಿಯೇ ಇರಲಿದೆ. ಕಾರ್ಖಾನೆಯ ಆಡಳಿತ ನಿರ್ವಹಣೆ ಮಾತ್ರ ಖಾಸಗಿಯವರಿಗೆ ನೀಡೋದಕ್ಕೆ ಅವಕಾಶ ಕೊಡಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಮಂಡ್ಯ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಲು ಸರ್ಕಾರ ಕಳೆದ ವರ್ಷವೇ ನಿರ್ಧರಿಸಿತ್ತು. ಕಳೆದ ವಾರವೂ ಈ ಸಂಬಂಧ ವಿಧಾನಸೌಧದಲ್ಲಿ ಸಭೆ ನಡೆಸಲಾಗಿತ್ತು. ಇತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರೈತ ಸಂಘ, ಕಬ್ಬು ಬೆಳೆಗಾರರು ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.