ಬೆಂಗಳೂರು: ಒಂದು ಕ್ಷಣವೂ ಪಶ್ಚಾತ್ತಾಪ ಪಡುವ ಜೀವನವನ್ನು ಅಂಬರೀಶ್ ನಡೆಸಲಿಲ್ಲ. ಬದುಕಿನುದ್ದಕ್ಕೂ ಪ್ರೀತಿಯನ್ನು ಹಂಚಿ, ಉತ್ಸಾಹದ ಬದುಕು ಸಾಗಿಸಿ ಹೋಗಿದ್ದು, ಅವರ ಕುಟುಂಬದ ಜೊತೆ ಎಂದೆಂದಿಗೂ ನಾವಿದ್ದೇವೆ. ಅವರ ಸುಖ ದುಃಖದಲ್ಲಿ ನಾವಿರುತ್ತೇವೆ. ಅಂಬಿಗೆ ಕೊಟ್ಟ ಡಬಲ್ ಪ್ರೀತಿಯನ್ನು ಅಭಿಷೇಕ್ ಅಂಬರೀಶ್ಗೆ ನೀಡಿ ಎಂದು ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಕಂಠೀರವ ಸ್ಟೂಡಿಯೋದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪ್ರತಿಮೆ ಹಾಗು ಸ್ಮಾರಕವನ್ನು ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು. ನಿರ್ಮಾಣ ಹಂತದಲ್ಲಿರುವ ಅಂಬರೀಶ್ ಮ್ಯೂಸಿಯಂ ಅನ್ನು ಸಹ ಮುಂದೆ ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಂಬರೀಶ್ ಹೆಸರಿನಲ್ಲೇ ಒಂದು ರೀತಿಯ ಎನರ್ಜಿ ಇದೆ. ಎಲ್ಲಿ ಅಂಬಿ ಇದಾನೋ ಅಲ್ಲಿ ಸಂತೋಷ, ನಗು ಇರಲಿದೆ. ಯಾವುದೇ ಗಂಭೀರ ವಿಷಯ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿಯೂ ಅಲ್ಲಿಗೆ ಅಂಬಿ ಬಂದರೆ ಖುಷಿಯಾಗುತ್ತಿತ್ತು. ಯಾಕೆಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಭರವಸೆ ನಮಗೆ ಖಚಿತವಾಗುತ್ತಿತ್ತು ಎಂದರು.
ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದರು. ಆರಂಭದ ದಿನಗಳಲ್ಲಿ 22 ದಿನ ರಾಮನಗರ ಚುನಾವಣೆಯಲ್ಲಿ ಅವರ ಪಕ್ಕದಲ್ಲೇ ಕುಳಿತು ಪ್ರಚಾರ ಮಾಡಿದ ದಿನವೂ ನೆನಪಿದೆ. ಸೋಲು ಗೆಲುವು ಎರಡನ್ನೂ ಸಮನಾಗಿ ತೆಗೆದುಕೊಂಡಿದ್ದ. ಕಾವೇರಿ ವಿಚಾರದಲ್ಲಿ ಒಂದು ಕ್ಷಣವೂ ಯೋಚಿಸಿದೆ ರಾಜೀನಾಮೆ ಬಿಸಾಕಿ ಬಂದಿದ್ದ. ಅಂದಿನ ಪ್ರಧಾನಿಗಳು ರಾಜೀನಾಮೆ ಅಂಗೀಕರಿಸದೆ ಮತ್ತೆ ಕರೆದು ಸಂಪುಟಕ್ಕೆ ಬನ್ನಿ ಎಂದರು. ಆದರೆ ಅಂಬಿ ಆ ಕಡೆ ತಿರುಗಿ ನೋಡಲಿಲ್ಲ. ಆ ರೀತಿ ಚಿರಸ್ಥಾಯಿಯಾಗಿ ಅವರು ಉಳಿದಿದ್ದಾರೆ. ಅವರ ಸ್ಮಾರಕವೂ ಚಿರಸ್ಥಾಯಿಯಾಗಿರಲಿದೆ ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದರು.
ನನ್ನ ಹಾಗು ಅಂಬರೀಶ್ ನಡುವಿನ ಒಡನಾಟ ಇಂದು ನಿನ್ನೆಯದ್ದಲ್ಲ. 37 ವರ್ಷದಿಂದ ನನ್ನ ಅಂಬಿ ಒಡನಾಟ, ಗೆಳೆತನ ಇತ್ತು. ನಾವಿಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದಾಗ ಒಮ್ಮೆ ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿದ್ದ. ಆದರೆ ಪ್ರತಿಸ್ಪರ್ಧಿಯಾಗಿ ನಾನು ಇರುವುದು ಎಂದು ಗೊತ್ತಾಗಿ ನನ್ನ ಗೆಳೆಯನ ವಿರುದ್ಧ ನಾನು ಪ್ರಚಾರ ಮಾಡುವುದಿಲ್ಲ ಎಂದು ತಿಳಿಸಿ ಪ್ರಚಾರ ಮಾಡದೆ ವಾಪಸ್ ಹೋಗಿದ್ದ ಎಂದು ಹಳೆಯ ನೆನಪನ್ನು ಸಿಎಂ ಮೆಲುಕು ಹಾಕಿದರು.
ಅಂಬರೀಶ್ ಮೂರ್ತಿ ಆಗಿದೆ. ಹಾಗಾಗಿ ಅದನ್ನು ಉದ್ಘಾಟನೆ ಮಾಡಿದ್ದೇವೆ. ಸ್ಮಾರಕ ಪೂರ್ತಿಯಾಗಿದೆ, ಹಾಗಾಗಿ ಅದನ್ನೂ ಉದ್ಘಾಟನೆ ಮಾಡಿದ್ದೇವೆ. ಆದರೆ ಮ್ಯೂಸಿಯಂ ಆದಷ್ಟು ಬೇಗ ಮುಗಿಯಲಿದೆ. ಇನ್ನು ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್, ದೊಡ್ಮನೆ ಕುಟುಂಬದ ಪರವಾಗಿ ರಾಘವೇಂದ್ರ ರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಚಿವ ಗೋಪಾಲಯ್ಯ ಸೇರಿ ಹಲವರು ಭಾಗಿಯಾಗಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಹೆಸರು ರೇಸ್ ಕೋರ್ಸ್ ರಸ್ತೆಯ ಮರುನಾಮಕರಣದಿಂದ ಚಿರಸ್ಥಾಯಿಯಾಗಿ ಉಳಿಯಲಿದೆ - ಸಿಎಂ: ನೇರ ದಿಟ್ಟ ನಿರಂತರ ಎಂಬಂತೆ ರೆಬೆಲ್ ಸ್ಟಾರ್ ಅಂಬರೀಶ್ ಆಗಿದ್ದರು. ಕರ್ನಾಟಕ ಜನರ ಮನಸ್ಸನ್ನು ಗೆದ್ದಂತಹ ನಟರಾಗಿದ್ದರು. ಅವರ ನೆನಪಿಗಾಗಿ ರೆಸ್ ಕೋರ್ಸ್ ರಸ್ತೆಯನ್ನು ಡಾ ಅಂಬರೀಶ್ ರಸ್ತೆಯನ್ನಾಗಿ ಸಂತೋಷದಿಂದ, ಅಭಿಮಾನಿಗಳ ಒತ್ತಾಸೆಯಿಂದ ಮರುನಾಮಕರಣ ಮಾಡಿದ್ದೇನೆ. ಅವರ ಕಾರ್ಯಕ್ಷೇತ್ರಗಳು ಹತ್ತಿರ ಇರುವ ಸ್ಥಳ ಇದಾಗಿದೆ. ಆದ್ದರಿಂದ ಈ ರಸ್ತೆಯ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಮೌರ್ಯ ಸರ್ಕಲ್ ನಿಂದ ಬಸವೇಶ್ವರ್ ಸರ್ಕಲ್ ವರೆಗಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಡಾ.ಎಂ.ಹೆಚ್ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ, ಅಂಬರೀಶ್ ಅವರದ್ದು ಅದ್ಭುತವಾದ ಅಭಿನಯ, ಸಹಜವಾಗಿ ನಟಿಸುತ್ತಿದ್ದರು. ಜನರ ಮನಸ್ಸು ಸೆಳೆಯುವ ವ್ಯಕ್ತಿತ್ವ. ನೇರವಾಗಿ ಸತ್ಯವನ್ನು ಮಾತನಾಡುವರು ಅವರಾಗಿದ್ದರು. ನಾಯಕತ್ವ ಗುಣಗಳಿರುವ ವ್ಯಕ್ತಿಯಾಗಿದ್ದರು. ಸಿನಿಮಾದ ಪರದೆಯ ಮೇಲೆ ಹೇಗಿದ್ದಾರೋ ನಿಜ ಜೀವನದಲ್ಲಿ ಹಾಗೆಯೇ ಇದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬರೀಶ್ ಪತ್ನಿ ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ಸಚಿವ ಸುಧಾಕರ್, ನಟ ರಾಘವೇಂದ್ರ ರಾಜ್ ಕುಮಾರ್, ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್, ರಾಕ್ ಲೈನ್ ವೆಂಕಟೇಶ್, ಚಿನ್ನೇಗೌಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಸುರಕ್ಷ 75 ಮಿಷನ್ 2023 ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆ: ಸಿ.ಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ‘ಸುರಕ್ಷ 75 ಮಿಷನ್ 2023’ ಅನ್ನು ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನ 75 ನಿರ್ಣಾಯಕ ಜಂಕ್ಷನ್‌ಗಳನ್ನು ಮರುವಿನ್ಯಾಸಗೊಳಿಸುವ ಮತ್ತು ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಗೆ, ಯಾರು ರಸ್ತೆ ಅಪಘಾತಗಳು, ಗಾಯಗಳು ಮತ್ತು ಸಾವಿಗೆ ಹೆಚ್ಚು ಗುರಿಯಾಗುತ್ತಾರೋ ಅಂತಹ ಜಂಕ್ಷನ್‌ಗಳನ್ನು ಸುರಕ್ಷಿತವಾಗಿರಿಸುವ ಗುರಿಯನ್ನು ಹೊಂದಿರುವ 'ಸುರಕ್ಷ 75 ಮಿಷನ್ 2023' ಅನ್ನು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಟ್ರಾಫಿಕ್ ಪೋಲೀಸ್, ವಿಶ್ವ ಸಂಪನ್ಮೂಲ ಸಂಸ್ಥೆಯ ಸಹಯೋಗದೊಂದಿಗೆ, ಬ್ಲೂಮ್ಬರ್ಗ್ ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ.
ಇದನ್ನೂ ಓದಿ:ದೇವರು ಭೂಮಿಗೆ ಕಳುಹಿಸಿದ್ದ ದೇವರ ಮಗ ಅಂಬರೀಶ್: ಅಂಬಿ ನೆನೆದು ಕಣ್ಣೀರು ಹಾಕಿದ ಸುಮಲತಾ