ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಕ್ಕೂರು ಬಳಿಯ ಶ್ರೀರಾಂಪುರದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಾದರಿ ಗ್ರಾಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಿಎಂ, ಈ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ 1 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮನೆ ಮನೆಗೆ ನಲ್ಲಿ ಯೋಜನೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸಚಿವ ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲೇ ವೈಶಿಷ್ಟ್ಯಪೂರ್ಣವಾದ ಗ್ರಾಮ ಇದು. ಇದು ರೂಪಗೊಳ್ಳಲು ಪ್ರಮುಖ ಕಾರಣಕರ್ತರು ಸ್ಥಳೀಯ ಶಾಸಕ ಕೃಷ್ಣಭೈರೇಗೌಡ. ಕರ್ನಾಟಕ ರಾಜ್ಯ ಹೇಗಿತ್ತು, ಹಿಂದೆ ಗ್ರಾಮೀಣ ಜನರು ಏನು ಮಾಡುತ್ತಿದ್ದರು ಎಂಬುವುದನ್ನು ಇಲ್ಲಿ ನೋಡಬಹುದು. ಇದನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಉದ್ದೇಶಿಸಿದ್ದೇವೆ. ಶಾಲಾ ಮಕ್ಕಳಿಗೆ ಇದನ್ನು ತೋರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದ ಪ್ರವೇಶ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದು ಹೇಳಿದರು.
ಶಾಸಕ ಕೃಷ್ಣಭೈರೇಗೌಡ ಮತನಾಡಿ, ಮಾದರಿ ಪಾರಂಪರಿಕ ಗ್ರಾಮ ನಮ್ಮ ಮೂರು ವರ್ಷಗಳ ಕನಸು. ಆ ಕನಸು ನನಸಾದ ಸಾರ್ಥಕತೆ ನಮ್ಮದು. ನಮ್ಮ ಗ್ರಾಮೀಣ ಪರಂಪರೆಯನ್ನು ಇಲ್ಲಿ ಬಹಳ ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. ಇದು ಹಿಂದಿನ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲರ ಕನಸಿನ ಕೂಸು. ಆಗ ಅವರು ಐದು ಕೋಟಿ ರೂ. ಆರಂಭಿಕ ಅನುದಾನ ನೀಡಿ ಶಂಕುಸ್ಥಾಪನೆ ಮಾಡಿದ್ದರು. ಈ ಗ್ರಾಮದ ನಿರ್ಮಾತೃ ಶೋಭಕ್ಕನವರ್, ಹಾವೇರಿ, ಹುಬ್ಬಳ್ಳಿ ಬಳಿ ಇಂತಹದ್ದೇ ಮಾದರಿ ಗ್ರಾಮ ನಿರ್ಮಿಸಿದ್ದಾರೆ. ಅದನ್ನು ನೋಡಿದ ಮೇಲೆ ಬೆಂಗಳೂರು ನಗರದಲ್ಲೂ ಇಂತಹ ಮಾದರಿ ಗ್ರಾಮ ರೂಪಿಸಬೇಕು ಎಂದು ಉದ್ದೇಶಿಸಿದ್ದೆವು. ನಮ್ಮ ಪ್ರಯತ್ನ ಸಾರ್ಥಕ ಎನಿಸುತ್ತಿದೆ ಎಂದರು.
ಪಕ್ಕದಲ್ಲೇ ರಾಚೇನಹಳ್ಳಿ-ದಾಸರಹಳ್ಳಿ ಕೆರೆ ಇದೆ. ಏಳೆಂಟು ವರ್ಷಗಳಿಂದ ಕೆರೆ ಅಭಿವೃದ್ಧಿ ಮಾಡಿದ್ದೇವೆ. ಆದರೆ ಒಳಚರಂಡಿ ನೀರು ರಾಜಕಾಲುವೆ ಮೂಲಕ ಕೆರೆ ಸೇರುತ್ತಿದೆ. ಹಾಗಾಗಿ ಇಲ್ಲೊಂದು ಸಂಸ್ಕರಣ ಘಟಕ ಸ್ಥಾಪಿಸಬೇಕು ಎಂದು ಉದ್ದೇಶಿಸಿದ್ದೇವೆ. ರಾಜಕಾಲುವೆ ಕೆಲಸವೂ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತುಬಿಟ್ಟಿದೆ. ಮಳೆ ಬಂದಾಗ ಈ ಮಾದರಿ ಗ್ರಾಮದ ಮುಖ್ಯ ದ್ವಾರದ ಬಳಿ ಎರಡು ಅಡಿ ನೀರು ನಿಲ್ಲುವಂತಾಗುತ್ತಿದೆ ಎಂದು ಹೇಳಿದರು.